ಕುಮಟಾ: ಗೋಕರ್ಣದ ಗಂಗಾವಳಿ ಸೇತುವೆ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಅವರು ಭಾನುವಾರ ಪರಿಶೀಲನೆ ನಡೆಸಿದರು.
ಸುರಿಯುವ ಮಳೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ದೋಣಿಯಲ್ಲಿ ಸಾಗಿ ವೀಕ್ಷಿಸಿದ ಶಾಸಕರು ಕಾಮಗಾರಿ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಮೇ ತಿಂಗಳಲ್ಲಿ ನಿಧಾನಗತಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಶಾಸಕರಿಗೆ ದೂರು ನೀಡಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನದಿಗೆ ಹಾಕಿದ ಮಣ್ಣು ತಕ್ಷಣವೇ ತೆರವು ಮಾಡಬೇಕು, ಮಳೆಗಾಲದ ಒಳಗೆ ಕಾಮಗಾರಿ ಬಹುತೇಕ ಮುಗಿದಿರಬೇಕು ಎಂದು ಖಡಕ್ ಸೂಚನೆ ನೀಡಿದ್ದರು.
ಈ ಬಳಿಕ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು. ನಾಡುಮಾಸ್ಕೇರಿ ಪಂಚಾಯ್ತಿ ಅಧ್ಯಕ್ಷರಾದ ಧನುಶ್ರೀ ಅಶೋಕ್ ಅಂಕೋಲೆಕರ್, ಹನೆಹಳ್ಳಿ ಪಂಚಾಯ್ತಿ ಅಧ್ಯಕ್ಷೆ ಭಾರತಿ ಗೌಡ, ಸದಸ್ಯರಾದ ರಾಜೇಶ ನಾಯ್ಕ, ನಾಗರಾಜ ತಾಂಡೆಲ್, ಜಗದೀಶ ಅಂಬಿಗ, ಚಂದ್ರಶೇಖರ ನಾಯ್ಕ, ದಯಾನಂದ ಮೇತಾ, ಶ್ರೀನಿವಾಸ ನಾಯಕ ಮುಂತಾದವರು ಇದ್ದರು.