Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಸಂಸ್ಥೆಯ ವ್ಯವಹಾರಗಳಲ್ಲಿ ಪಾರದರ್ಶಕತೆ ಇದೆ, ಅವ್ಯವಹಾರದ ಆರೋಪ ಶುದ್ದ ಸುಳ್ಳು : ದಿನಕರ ಕಾಮತ ಸ್ಪಷ್ಟನೆ

ಕುಮಟಾ : ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ  ಸುಧಾಕರ ನಾಯಕ ಅವರ ಮೇಲೆ ಆರೋಪ ಬಂದ ತಕ್ಷಣ ಸೊಸೈಟಿಯ ಆಡಳಿತ ಅವರನ್ನು ತಕ್ಷಣದಿಂದ ಅಮಾನತಿನಲ್ಲಿಟ್ಟು ಸತ್ಯಾಸತ್ಯತೆಯನ್ನು ಒರೆ ಹಚ್ಚುವ ಕೆಲಸ ಮಾಡಿದೆ.
ಎಂದು ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ ಹೇಳಿದರು. 
ಅವರು  ಡಾ. ಬಾಳಿಗಾ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಇತ್ತೀಚಿನ ವರ್ಷದಲ್ಲಿ ಸಂಘಟಿತವಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಅಲ್ಯುಮ್ನಿ ಟ್ರಸ್ಟಿನ ಟ್ರಸ್ಟಿ ಮಹಾರಾಷ್ಟ್ರ ನಿವಾಸಿ ರಾಮಾ ಶಾನಭಾಗ ಎಂಬವರು ನೀಡಿದ ದೂರಿನಂತೆ ಅವ್ಯವಹಾರದ ಪ್ರಕರಣ ದಾಖಲಾಗಿದೆ. ಈ ಮೂಲಕ ಅಲ್ಯುಮ್ನಿ ಟ್ರಸ್ಟಿನವರು ಜಿಲ್ಲೆಯ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಕೆನರಾ ಕಾಲೇಜು ಸೊಸೈಟಿಯ ಈವರೆಗಿನ ಸಾಧನೆ, ಇತಿಹಾಸ, ಅಭಿಮಾನ, ಗೌರವ, ವಿಶ್ವಾಸಾರ್ಹತೆಯ ಮೇಲೆ ಕಪ್ಪು ಚುಕ್ಕೆ ಹಾಕಿದ್ದಾರೆ. ಇಂಥ ಸಂಸ್ಥೆಯನ್ನು ಕಟ್ಟಲು ಸಾವಿರಾರು ಜನ ಬೆವರು ಸುರಿಸಿದ್ದಾರೆ. ಆದರೆ ಇದೆಲ್ಲವನ್ನೂ ಒಂದು ಕ್ಷಣದಲ್ಲಿ ಕೆಡಿಸುವ ಪ್ರಯತ್ನ ನಡೆದಿದೆ. ಕಾರ್ಯದರ್ಶಿ ಸುಧಾಕರ ನಾಯಕ ಅವರ ಮೇಲೆ ಆರೋಪ ಬಂದ ತಕ್ಷಣ ಸೊಸೈಟಿಯ ಆಡಳಿತ ಅವರನ್ನು ತಕ್ಷಣದಿಂದ ಅಮಾನತಿನಲ್ಲಿಟ್ಟು ಸತ್ಯಾಸತ್ಯತೆಯನ್ನು ಒರೆಹಚ್ಚುವ ಕೆಲಸ ಮಾಡಿದೆ. ಈ ವಿಷಯದಲ್ಲಿ ಸತ್ಯಶೋಧನಾ ಸಮಿತಿ ರಚಿಸುವ ಚಿಂತನೆಯೂ ಸೊಸೈಟಿ ಮಾಡಿದೆ. ಕೆನರಾ ಕಾಲೇಜು ಸೊಸೈಟಿಯ ಶಿಕ್ಷಣ ಸಂಸ್ಥೆಗಳ ಯಾವುದೇ ಅಲ್ಯುಮ್ನಿ ಅಸೋಸಿಯೇಷನ್ ಮೂಲಕವೂ ಚಿಕ್ಕ ಅವ್ಯವಹಾರವೂ ನಡೆದಿಲ್ಲ ಮತ್ತು ನಡೆಯುವುದು ಸಾಧ್ಯವಿಲ್ಲ. ಇಲ್ಲಿ ಪ್ರತಿಯಿಂದು ಲೆಕ್ಕವ್ಯವಹಾರವೂ ಒಬ್ಬ ವ್ಯಕ್ತಿಯ ಸಹಿಯಿಂದ ನಡೆಯುವುದಿಲ್ಲ. ಕಾರ್ಯದರ್ಶಿ ಹಾಗೂ ಪ್ರಾಚಾರ್ಯರ ಜಂಟಿ ಖಾತೆಯಲ್ಲೇ ವ್ಯವಹಾರಗಳು ನಡೆಯುತ್ತವೆ. ಯಾವುದೇ ವ್ಯವಹಾರವೂ ಹಲವು ಹಂತಗಳಲ್ಲಿ ಪರಿಶೀಲನೆ ಮತ್ತು ದೃಢೀಕರಣದ ನಂತರವೇ ನಿರ್ಣಯಗಳು ಜಾರಿಯಾಗುತ್ತವೆ, ಹಣಕಾಸು ವ್ಯವಹಾರಗಳು ಮುಂದುವರೆಯುತ್ತವೆ. ಪ್ರತಿವರ್ಷ ಸಂಸ್ಥೆಯ ಆಡಿಟ್ ನಡೆಯುತ್ತದೆ. ಯಾವುದೇ ತನಿಖೆಗೂ ಸಿದ್ಧರಿದ್ದೇವೆ. 
ಕೆನರಾ ಕಾಲೇಜು ಸೊಸೈಟಿಯ ಸಮಿತಿಯ ಗಮನಕ್ಕೆ ಕನಿಷ್ಟ ಸೌಜನ್ಯಕ್ಕೂ ತಾರದೇ, ಚರ್ಚಿಸದೇ, ಸಂಶೋಧಿಸದೇ ಅವ್ಯವಹಾರದ ಗಂಭೀರ ಆರೋಪ ಮಾಡಿ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ ಸುಧಾಕರ ನಾಯಕ ಹಾಗೂ ಸಂಸ್ಥೆಯ ಪ್ರಾಚಾರ್ಯರು, ಬೋಧಕರನ್ನು ಯಾವ ಕಾರಣಕ್ಕೆ ತಳಕು ಹಾಕಲಾಗುತ್ತಿದೆ ಎನ್ನುವುದು ಅಚ್ಚರಿ ತಂದಿದೆ ಎಂದು ಡಿ.ಎಂ. ಕಾಮತ ಹೇಳಿದರು. 
ಕಲಾ ಮತ್ತು ವಿಜ್ಞಾನ ವಿಭಾಗದ ಪ್ರಾಚಾರ್ಯ ಪಿ.ಕೆ.ಭಟ್ಟ, ವಾಣಿಜ್ಯ ಕಾಲೇಜು ಪ್ರಾಚಾರ್ಯ ಎಸ್. ವಿ.ಶೇಣ್ವಿ ಅವರು ನಮ್ಮಲ್ಲೂ ಅಲ್ಯುಮ್ನಿ ಅಸೋಸಿಯೇಷನ್ ಖಾತೆಗಳಿದ್ದರೂ ಹಣಕಾಸಿನ ಅವ್ಯವಹಾರಗಳು ನಡೆದಿಲ್ಲ. ಪ್ರತಿಯೊಂದು ವ್ಯವಹಾರಕ್ಕೂ ದಾಖಲೆಗಳಿವೆ ಎಂದರು. 
ಸೊಸೈಟಿಯ ಸದಸ್ಯ ಅತುಲ ಕಾಮತ ಎಂಬ ಮಾತನಾಡಿ, ಕೆನರಾ ಕಾಲೇಜು ಸೊಸೈಟಿಯಡಿ ಹಲವು ಅಲ್ಯುಮ್ನಿ ಅಸೋಸಿಯೇಷನ್ ಗಳನ್ನು ಕಾರ್ಯದರ್ಶಿ ಸುಧಾಕರ ನಾಯಕ ಹುಟ್ಟು ಹಾಕಿದ್ದಾರೆ. ಆಮೂಲಕ ಅವ್ಯವಹಾರ ಎಸಗಲಾಗಿದೆ ಎಂಬುದು ಶುದ್ಧಸುಳ್ಳು ಎಂದರು. 

ಕಮಲಾ ಬಾಳಿಗಾ ಕಾಲೇಜಿನ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ ಮಾತನಾಡಿ, ೧೯೭೯ ರಲ್ಲಿ ಕೆ.ಎನ್. ಬೈಲಕೇರಿ ಪ್ರಾಚಾರ್ಯರಾಗಿದ್ದಾಗ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕರಿಸುವುದಕ್ಕಾಗಿಯೇ ಸಂಘಟಿತವಾದ ನಮ್ಮ ಸಂಸ್ಥೆಯ ಅಲ್ಯುಮ್ನಿ ಅಸೋಸಿಯೇಷನ್ ಖಾತೆಯಲ್ಲಿ ಕೇವಲ ೮೨,೨೯೦ ರೂಗಳಿದೆ. ಸುಧಾಕರ ನಾಯಕ ಕಾರ್ಯದರ್ಶಿ ಹುದ್ದೆ ಸ್ವೀಕರಿಸಿದ ಬಳಿಕ ಈ ಖಾತೆಯಿಂದ ವ್ಯವಹರಿಸಿಯೇ ಇಲ್ಲ. ಆದರೆ ೭೫ ಲಕ್ಷಕ್ಕೂ ಹೆಚ್ಚು ಅವ್ಯವಹಾರದ ಆರೋಪ ಮಾಡಲಾಗಿದೆ. ಇಂಥ ಗಂಭೀರ ಸುಳ್ಳು ಆರೋಪ ಮಾಡುವ ಮೊದಲು ಕನಿಷ್ಟ ಪಕ್ಷ ಪ್ರಾಚಾರ್ಯರನ್ನಾದರೂ ಸಂಪರ್ಕಿಸದೇ ಇರುವುದು ಮತ್ತು ನಮ್ಮನ್ನೂ ಅವ್ಯವಹಾರದ ಭಾಗಿಯಾಗಿ ಬಿಂಬಿಸಿರುವುದು ನೋವನ್ನುಂಟುಮಾಡಿದೆ ಎಂದರು. 
ಈ ವೇಳೆ ವಿ.ಎಚ್.ನಾಯಕ ಬೆಣ್ಣೆ, ಎ.ಪಿ. ಕಾಮತ, ಆರ್. ಬಿ. ಕಾಮತ, ಎನ್ ಆರ್. ಶಾನಭಾಗ, ಹನುಮಂತ ಶಾನಭಾಗ, ವಿ.ಎಂ. ಪೈ ಇನ್ನಿತರರು ಇದ್ದರು.