ಕುಮಟಾ : ``ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಕಲಿಕೆಯಲ್ಲಿ ಯುವ ಸಮೂಹಕ್ಕೆ ನವಚೈತನ್ಯ ತುಂಬುವ ಕಾರ್ಯವಾಗಲಿ'' ಎಂದು ಡಯಟ್ ಉಪನ್ಯಾಸಕಿ ಭಾರತಿ ನಾಯ್ಕ ಹೇಳಿದರು.ಅವರು ಪಟ್ಟಣದ ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ `ಕುಮಟಾ ಕನ್ನಡ ಸಂಘ'ದಿಂದ ಆಯೋಜಿಸಲಾದ ದ್ವಿತೀಯ ಪಿಯುಸಿಯಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾತೃಭಾಷೆ ಕನ್ನಡ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಅತಿಯಾದ ಇಂಗ್ಲೀಷ್ ವ್ಯಾಮೋಹದಿಂದಾಗಿ ನಮ್ಮ ತಾಯಿ ಭಾಷೆ ಗೌಣವಾಗುತ್ತಿರುವುದು ನೋವಿನ ಸಂಗತಿ. ಕನ್ನಡ ಶಾಲೆಯಲ್ಲೆ ಕಲಿತು ಸಾಕಷ್ಟು ಸಾಧನೆ ಮಾಡಿದ ಅಂಸಖ್ಯಾತರು ನಮ್ಮ ನಡುವಿದ್ದಾರೆ. ಯಾವುದೇ ಭಾಷೆಗೆ ವಿರೋಧ ಬೇಡ. ಆದರೆ ಕನ್ನಡ ಭಾಷೆ ಉಳಿಸಿ ಬೆಳೆಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಶಾಸ್ವತವಾಗಿ, ಸದೃಢವಾಗಿ ಕನ್ನಡ ಉಳಿಯುಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರ್ಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸುವ ಮೂಲಕ ಕನ್ನಡ
ಭಾಷೆಯನ್ನು ಉಳಿಸಲು ಪ್ರಯತ್ನ ಶೀಲರಾಗೋಣ. ಈ ದಿಶೆಯಲ್ಲಿ ಕುಮಟಾ ಕನ್ನಡ ಸಂಘ ಇಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಉತ್ತಮ ಕಾರ್ಯ ಮಾಡಿ ಮಾದರಿಯಾಗುವುದರ ಜೊತೆಯಲ್ಲಿ ನಾಡು, ನುಡಿ,ಭಾಷಾಭಿಮಾನ ಬೆಳೆಸುವಂತೆ ಮಾಡುತ್ತಿರುವುದು ಶ್ಲಾಘನೀಯ'' ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್ಟ ಮಾತನಾಡಿ, ``ಕಳೆದ ಆರು ತಿಂಗಳ ಹಿಂದೆ ಜನ್ಮ ತಳೆದ ಕುಮಟಾ ಕನ್ನಡ ಸಂಘ ನಿರೀಕ್ಷೆಗೂ ಮೀರಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ನೆನಪಾಗುಳಿಯುವಂತೆ
ಮಾಡಿದೆ. ಅರ್ಹ ಪ್ರತಿಭೆಗಳನ್ನು ಗೌರವಿಸುವ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ
ಬೆಳವಣಿಗೆ. ಕಲಿಕೆಗೆ ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳು ಸಮಾಜಕ್ಕೆ ಆಸ್ತಿಯಾಗುವಂತಾಗಲಿ'' ಎಂದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ``ಪ್ರತಿಭಾ ಫಲಾಯನವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಪ್ರತಿಭೆಗಳು ನಮ್ಮ ನಡುವೆಯೇ ಇದ್ದು, ಕನ್ನಡ ತಾಯಿಯ
ಸೇವೆ ಮಾಡುವಂತಾಗಲಿ. ಕನ್ನಡ ನಮ್ಮೆಲ್ಲರ ಉಸಿರಾಗಿ, ಮುಂದಿನ ಪೀಳಿಗೆಯೂ ಕನ್ನಡದಲ್ಲೇ ಕಡ್ಡಾಯವಾಗಿ ಶಿಕ್ಷಣ
ಪಡೆಯುವಂತಾಗಲಿ. ಈ ದಿಶೆಯಲ್ಲಿ ನಮ್ಮ ಸಂಘ ಪೂರಕವಾಗಿ ನಿಲ್ಲಲಿದೆ'' ಎಂದರು.
ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರು ಅಂಕಗಳಿಸಿದ ವಿದ್ಯಾರ್ಥಿಗಳಾದ ಎ,ವಿ.ಬಾಳಿಗಾ ವಾಣಿಜ್ಯ
ಮಹಾವಿದ್ಯಾಲಯದ ರವಿ ಪ್ರಭು ಹಾಗೂ ನೆಲ್ಲಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಶ್ರೀಧರ ಗೌಡ ಇವರನ್ನು ಗೌರವಿಸಲಾಯಿತು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ಜಿ. ಹೆಗಡೆ , ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾ ವಿದ್ಯಾಲಯದ (ಪದವಿ) ಪ್ರಾಚಾರ್ಯ ಡಾ. ಎಸ್. ವಿ. ಶೇಣ್ವಿ, ಉಪನ್ಯಾಸಕ ಅರವಿಂದ ನಾಯಕ, ಕನ್ನಡ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪಟಗಾರ, ಮಾಧ್ಯಮ ಸಲಹೆಗಾರ ಸಂತೋಷ
ನಾಯ್ಕ, ಸದಸ್ಯರಾದ ಸುರೇಖಾ ವಾರೇಕರ್, ನಾಗಪ್ಪ ಮುಕ್ರಿ, ಶಿವಯ್ಯ ಹರಿಕಾಂತ ಇನ್ನಿತರರು ಇದ್ದರು.