ಕುಮಟಾ: ಶಾಸಕರಾದ ದಿನಕರ ಶೆಟ್ಟಿಯವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಯ ಕುರಿತು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಮುಖ್ಯವಾಗಿ ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟಾ ತಾಲೂಕನ್ನೇ ಆಯ್ಕೆಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕುಮಟಾ ತಾಲೂಕಿನಲ್ಲಿ ಈ ಆಸ್ಪತ್ರೆ ನಿರ್ಮಾಣವಾಗುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಜನರಿಗೆ ಆಗುವ ಅನುಕೂಲಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆಮಾಡಿದರು. ಶಾಸಕರ ಈ ಬೇಡಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮವಾಗಿ ಪ್ರತಿಕ್ರಿಯಿಸಿದರು.
ದಿನಕರ ಶೆಟ್ಟಿ ಅತಿವೃಷ್ಟಿಯಿಂದ ಕುಮಟಾ-ಹೊನ್ನಾವರ ಭಾಗದಲ್ಲಿ ಸಂಭವಿಸಿರುವ ಹಾನಿಯ ಪರಿಹಾರಕ್ಕಾಗಿ ಸೂಕ್ತಪ್ರಮಾಣದ ಅನುದಾನವನ್ನು ಶೀಘ್ರವೇ ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಕೋರಿದರು ಹಾಗೂ ಕುಮಟಾ ಪುರಸಭೆ ಹಾಗೂ ಹೊನ್ನಾವರ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಹಾನಿಗೊಳಗಾಗಿರುವ ರಸ್ತೆಗಳ ದುರಸ್ಥಿಯ ಸಲುವಾಗಿ NDRF ಗೆ ನೀಡಿರುವ ಬೇಡಿಕೆಗೆ ಕೂಡಲೇ ಅನುಮೋದನೆ ದೊರಕಿಸಿಕೊಡುವಂತೆ ಮನವಿಸಲ್ಲಿಸಿದರು.
ನಮ್ಮ ಕ್ಷೇತ್ರದ ಸಮಸ್ಯೆಗಳ ಪರಿಶೀಲನೆಗಾಗಿ ಹಾಗೂ ಕೆಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಾಗಿ ಕುಮಟಾ-ಹೊನ್ನಾವರಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳನ್ನು ಈ ಸಂದರ್ಭದಲ್ಲಿ ಆಮಂತ್ರಿಸಿದರು.