ಕುಮಟಾ: ದಾರಿ ಮದ್ಯೆ ಸಿಕ್ಕ ಸುಮಾರು 20 ಸಾವಿರ ನಗದು ಹಾಗೂ ಎಟಿಮ್ ಕಾರ್ಡ್ ಕಳೆದುಕೊಂಡಿದ್ದ ವ್ಯಕ್ತಿಯೋರ್ವರಿಗೆ ಮರಳಿಸುವ ಮೂಲಕ ತಾಲೂಕಿನ ಹರಕಡೆಯ ರಿಕ್ಷಾ ಚಾಲಕ ದೇವು ಗೌಡ ದೀಪಕ ಭಂಡಾರಿ ಮಾನವೀಯತೆ ಮೆರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರ ದೀವಗಿ ಅಘನಾಶಿನಿ ಸೇತುವೆ ಬಳಿ ಶುಕ್ರವಾರ ಮುರೂರು ಕರ್ಕಿಮಕ್ಕಿಯ ಮೂಲದ ಅಶೋಕ ಕರಿಯಾ ಗೌಡ ಎನ್ನುವವರು ವಾಹನದಲ್ಲಿ ತೆರಳುವ ವೇಳೆ ಎಟಿಎಂ ನಿಂದ ವಿತ್ ಡ್ರಾ ಮಾಡಿಕೊಂಡಿದ್ದ 20 ಸಾವಿರ ನಗದು ಹಾಗೂ ಎಟಿಎಂ ಕಾರ್ಡ್ ನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡಿದ್ದು, ಅರಿವಿಲ್ಲದೆ ದಾರಿ ಮದ್ಯೆ ಈ ಚೀಲವನ್ನು ಕಳೆದುಕೊಂಡಿದ್ದರು.
ಹರಕಡೆಯ ರಿಕ್ಷಾ ಚಾಲಕರಾದ ದೇವು ಗೌಡ ಎನ್ನುವವರಿಗೆ ಈ ಚೀಲ ದೊರಕಿದ್ದು, ಈ ವೇಳೆ ಸ್ಥಳೀಯ ಅಂಗಡಿಕಾರರಾದ ರಣತುಂಗ ಅಂಬಿಗ, ಮಾದೇವ ಗೌಡ ಇವರುಗಳು ನೆರವಿನಿಂದ ಎಟಿಎಂ ಕಾರ್ಡ್ ನಲ್ಲಿರುವ ಹೆಸರಿರುವವರನ್ನು ಹುಡುಕಿದ್ದಾರೆ.ಈ ವೇಳೆ ಕರ್ಕಿಮಕ್ಕಿಯ ಅಶೋಕ ಗೌಡ ಅವರಿಗೆ ಕರೆಮಾಡಿದಾಗ ಹಣ ಕಳೆದುಕೊಂಡಿರುವ ವಿಷಯ ತಿಳಿದು ಬಂದಿದೆ.
ನಂತರ ತನ್ನ ಗುರುತಿನಿ ಚೀಟಿಯೊಂದಿಗೆ ಬಂದ ಅಶೊಕ್ ಗೌಡ ಅವರಿಗೆ ನಗದು ಹಾಗೂ ಎಟಿಎಂ ಮರಳಿಸಿದ್ದಾರೆ.
ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.