ಹೊನ್ನಾವರ: ರಾಜ್ಯ ಯೋಗಾಸನ ಕ್ರೀಡಾ ಸಂಘದಿಂದ ಬೆಂಗಳೂರು ಬಿಬಿಎಂಪಿ ಕೇಂದ್ರ ಕಚೇರಿಯ ಡಾ|| ರಾಜಕುಮಾರ ಗಾಜಿನಮನೆಯಲ್ಲಿ ಆಯೋಜಿಸಲಾಗಿದ್ದಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2022ನಲ್ಲಿ ತಾಲೂಕಿನ ಖರ್ವಾ ನಾಥಗೇರಿಯ ಮಹೇಂದ್ರ ಗಣಪತಿ ಗೌಡ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಆಯ್ಕೆಯಾದ ಮಹೇಂದ್ರ ಪಟ್ಟಣದ ದಿ.ಮೋಹನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವ್ಯಾಸಂಗದಲ್ಲಿರುವ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಖರ್ವಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ, ಯೋಗಪಟು ರಾಜೇಶ್ವರಿ ಹೆಗಡೆ ತರಬೇತಿ ನೀಡಿದ್ದರು. ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್‌ನಲ್ಲಿ 4 ವರ್ಷ ಹಾಗೂ 27 ವರ್ಷದ ವಯೋಮಾನದ ಕ್ರೀಡಾಪಟುಗಳಿಗೆ ತೀರ್ಪುಗಾರರಾಗಿಯು ಸಹ ರಾಜೇಶ್ವರಿ ಅವರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಯೋಗಾಸನ, ಆರ್ಟಿಸ್ಟಿಕ್ ಯೋಗಾಸನ, ರಿದಮಿಕ್ ಯೋಗಾಸನ ಮಾದರಿಯಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಚಾಂಪಿಯನ್‌ಶಿಪ್ ನಲ್ಲಿ 900 ಯೋಗಪಟುಗಳು ಪಾಲ್ಗೊಂಡಿದ್ದರು. 9ರಿಂದ 28 ವರ್ಷ ವಯೋಮಿತಿಯ ಸ್ಪರ್ಧಾಳುಗಳು ಆರು ವಿಭಾಗದಲ್ಲಿ ತಮ್ಮ ಯೋಗ ಕೌಶಲವನ್ನು ಪ್ರದರ್ಶಿಸಿದರು. 9 ರಿಂದ 14, 10ರಿಂದ15, 14ರಿಂದ19, 15ರಿಂದ20, 19ರಿಂದ27 ಹಾಗೂ 20ರಿಂದ 29 ವರ್ಷದವರ ನಡುವೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ವಿಜೇತರಾದ ಪ್ರತಿ ವಿಭಾಗದ ತಲಾ ಐವರು ನವೆಂಬರ್ 26-27ರಂದು ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ.