Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಪ್ರವಾಹದಿಂದ ಸಂತ್ರಸ್ತರಾದ ಎಲ್ಲಾ ಮನೆಗಳಿಗೆ ಹೆಚ್ಚಿನ ಪರಿಹಾರಕ್ಕೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಮನವಿ

ಹೊನ್ನಾವರ: ಪ್ರವಾಹದಿಂದ ಸಂತ್ರಸ್ತರಾದ ತಗ್ಗು ಪ್ರದೇಶಗಳ ಎಲ್ಲಾ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡುವ ಮತ್ತು ಅತಿವೃಷ್ಟಿಯಿಂದ ಹಾನಿಗೊಂಡ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕ ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ನಂತರ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕ, ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪದೇ ಪದೇ ಪ್ರವಾಹ ಉಂಟಾಗುತ್ತಿದ್ದು ಇದರಿಂದಾಗಿ ಹಲವು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿವೆ. ಪ್ರವಾಹದಿಂದಾಗಿ ತಗ್ಗು ಪ್ರದೇಶಗಳ ಮನೆಗಳ ಸುತ್ತಲೂ ನೀರು ತುಂಬುವುದಲ್ಲದೇ ಕಸ ಕಡ್ಡಿಗಳು, ಮಣ್ಣು ಇವುಗಳೆಲ್ಲ ಮನೆಗಳ ಸುತ್ತಲೂ ಸಂಗ್ರಹಗೊಂಡು ಇವುಗಳೆಲ್ಲ ಕೊಳೆತು ರೋಗ ರುಜಿನಗಳಿಗೆ ಕಾರಣವಾಗುತ್ತಿವೆ. ಇದರಿಂದ ಹಲವು ಜನರಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿನ ಬಾವಿಗಳಿಗೆ ಕೂಡ ಹೊಲಸು ನೀರು ತುಂಬುವುದರಿಂದ ಬಾವಿ ಕಲುಷಿತಗೊಂಡು ಕುಡಿಯುವ ನೀರಿಗೂ ಬಹಳಷ್ಟು ದೂರ ಹೋಗಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ.

 ತೀವ್ರ ಮಳೆಯಿಂದಾಗಿ ಬಾವಿಗಳನ್ನು ಸ್ವಚ್ಛಗೊಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೊಲಸು ದುರ್ವಾಸನೆಗಳಿಂದ ಮನೆಗಳಲ್ಲಿ ವಾಸ್ತವ್ಯ ಕೂಡ ಮಾಡಲು ತುಂಬಾ ಕಷ್ಟವಾಗಿರುತ್ತದೆ. ತೋಟ - ಗದ್ದೆಗಳಿಗೆ ಹಾಕಿದ ಗೊಬ್ಬರ ಮಣ್ಣುಗಳು ಕೂಡ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸುತ್ತಿದೆ. ಮನೆಯ ಸುತ್ತಲೂ ನೀರು ತುಂಬುವುದರಿಂದ ಮನೆ ಕೂಡ ಜೀರ್ಣಾವಸ್ಥೆ ತಲುಪುತ್ತಿದೆ. ಅಲ್ಲದೇ ಹಲವು ದಿನಗಳ ಕಾಲ ಮನೆ ತೇವಾಂಶಗೊಂಡು ವಾಸಿಸಲು ಅನಾನುಕೂಲವಾಗುತ್ತಿದೆ. ಕುಡಿಯುವ ನೀರಿಲ್ಲದೇ ಉಳಿದ ಬಳಕೆಗೂ ನೀರು ಸಿಗದಂತಾಗಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳ ಕುಟುಂಬಗಳಿಗೆ ಜೀವನ ನಡೆಸುವುದು ತುಂಬ ಕಷ್ಟದಾಯಕವಾಗಿದೆ.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಎನ್ ಸುಬ್ರಮಣ್ಯ, ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪ ಮಹೇಶ, ವಿನೋಧ ನಾಯ್ಕ, ಹರೀಶಚಂದ್ರ ನಾಯ್ಕ, ಕಮಲಾಕರ ಮುಕ್ರಿ, ನವೀನ ನಾಯ್ಕ,, ಕಾಂಗ್ರೆಸ್ ಮುಖಂಡರಾದ ಹುಲಿಯಣ್ಯ ಗೌಡ, ರವಿ ಶೆಟ್ಟಿ ಕವಲಕ್ಕಿ, ಲಂಭೋಧರ ನಾಯ್ಕ, ರಾಮಚಂದ್ರ ನಾಯ್ಕ, ಮಹಾಬಲೇಶ್ವರ ನಾಯ್ಕ, ಗಜಾನನ ಗುನಗಾ ಕಾಂಗ್ರೆಸ್ ಕಾರ್ಯಕರ್ತರು ಇತರಿದ್ದರು.