ಕುಮಟಾ: ವಸ್ತುನಿಷ್ಠ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಮಾತ್ರ ಓದಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರ ಜವಾಬ್ದಾರಿ ಮಹತ್ತರವಾಗಿದ್ದು ವರದಿ ಮಾಡಬೇಕಾದರೆ ತಾರತಮ್ಯ ಮಾಡಬಾರದು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾ ರಂಗವೂ ಹೊಂದಾಣಿಕೆಯಿಂದ ಸಾಗಬೇಕು ಎಂದು ಕಿವಿಮಾತು ಹೇಳಿದರು.ಪರಿಸರ ತಜ್ಞ ಶಿವಾನಂದ ಕಳವೆ ಮಾತನಾಡಿ, ಟಿವಿ ಮಾಧ್ಯಮಗಳು ಖಾಸಗೀಕರಣವಾಗಿ ಬದಲಾಗಿದೆ. ಪತ್ರಿಕಾರಂಗದಲ್ಲಿ ಒಮ್ಮೆ ವಿಶ್ವಾಸ ಕಳೆದುಕೊಂಡರೆ ಮತ್ತೆ ಗಳಿಸುವುದು ಕಷ್ಟಕರ. ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವ ಮನೋಭಾವವನ್ನು ಪತ್ರಕರ್ತರು ಹೊಂದಬೇಕು ಎಂದು ತಿಳಿಸಿದರು.
ಹೊಸದಿಗಂತ ಪತ್ರಿಕೆ ಸಂಪಾದಕರಾದ ವಿನಾಯಕ ಭಟ್ಟ ಮೂರೂರು ಮಾತನಾಡಿ, ಹೊಸ ಮಾಧ್ಯಮಗಳು ಬಂದ ಬಳಿಕ ಪತ್ರಿಕಾರಂಗದ ವ್ಯಾಖ್ಯಾನ ಬದಲಾಗಿದೆ. ಆದರೆ, ಅನೇಕ ಬದಲಾವಣೆಗೆ ಜನರ ಅಭಿರುಚಿಗಳೇ ಕಾರಣವಾಗಿದೆ. ಪತ್ರಿಕಾ ರಂಗ ಎಂದರೆ ಸ್ವ ಇಚ್ಚೆಯೆಂದು ಭಾವಿಸಿಕೊಳ್ಳಬಾರದು. ಅದರಲ್ಲಿರುವ ಕಟ್ಟುಪಾಡುಗಳ ಬಗ್ಗೆ ವಿವೇಚನೆ ಹೊಂದಿರಬೇಕು. ಪತ್ರಿಕಾ ರಂಗದವರು ಪರಸ್ಪರ ಆತ್ಮವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಭಾವಗೀತೆ ಸ್ಫರ್ಧೆಯಲ್ಲಿ ಪೃಥ್ವಿ ಹೆಗಡೆ, ದ್ವಿತೀಯ ರಾಜೇಶ್ವರಿ ಹೆಗಡೆ, ತೃತೀಯ ಸ್ಥಾನವನ್ನು ಶ್ರಾವ್ಯ ಶ್ರೀಧರ ನಾಯ್ಕ ಪಡೆದುಕೊಂಡರು. ಪ್ರಬಂಧ ಸ್ಫರ್ಧೆಯಲ್ಲಿ ಪೂಜಾ ಅವಧಾನಿ ಪ್ರಥಮ, ದೀಕ್ಷಾ ಹೆಗಡೆ ದ್ವಿತೀಯ ಸ್ಥಾನ, ಅಚ್ಯುತ್ ಹೆಗಡೆ ತೃತೀಯ ಸ್ಥಾನ ಗೆದ್ದುಕೊಂಡರು.
ಪರಿಸರ ತಜ್ಞ ಶಿವಾನಂದ ಕಳವೆ, , ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಜಿಜಿ ಹೆಗಡೆ, ಚಂದನ ವಾಹಿನಿ ಪ್ರತಿನಿಧಿ, ಹಿರಿಯ ವಕೀಲರೂ ಆದ ಗಣೇಶ್ ರಾವ್, ಪ್ರಾಂಶುಪಾಲ ಡಿ.ಎನ್.ಭಟ್ಟ, ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ಇದ್ದರು. ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಸ್ವಾಗತಿಸಿದರು. ಜಯದೇವ ಬಳಗಂಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಮಂಜುನಾಥ ಈರಗೋಪ್ಪ ಇದ್ದರು.