ಕುಮಟಾ : ಅಧಿಕಾರಿಗಳು ಯಾರೂ ಫೋನ್ ಸ್ವಿಚ್ ಆಫ್ ಮಾಡುವಂತಿಲ್ಲ. ನೆರೆ ಸಂಭವನೀಯತೆ ಮುಗಿಯುವವರೆಗೆ ರಜೆ ಇಲ್ಲವೇ ಇಲ್ಲ. ಎಲ್ಲಿಯೂ ಜೀವಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕಿದ್ದು, ನೆರೆ ಸಂತ್ರಸ್ತರ ನೆರವಿಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತಾಪಂ ಸಭಾಭವನದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ನೆರೆ ಪರಿಹಾರ ವಿತರಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಿದರೆ ನೆರೆ ಸಮಸ್ಯೆ ನಿಭಾಯಿಸುವುದು ಕಷ್ಟವಲ್ಲ.
ನೆರೆ ಸಂಭವನೀಯ ದೀವಗಿ, ಹೆಗಡೆ, ನಾಡುಮಾಸ್ಕೇರಿ, ವಾಲಗಳ್ಳಿ, ಸೊಪ್ಪಿನಹೊಸಳ್ಳಿ, ಮಿರ್ಜಾನ, ಹಿರೇಗುತ್ತಿ, ಗೋಕರ್ಣ, ಕೂಜಳ್ಳಿ, ಕಾಗಾಲ, ಕಲಭಾಗ, ಮೂರೂರು, ಕಡತೋಕ, ಹಳದೀಪುರ, ಕಡ್ಲೆ, ಕರ್ಕಿ, ಕುಮಟಾ ಪಟ್ಟಣದ ನೆರೆ ಸಮಸ್ಯೆ ಹಾಗೂ ಪರಿಹಾರದ ಮಾಹಿತಿಯನ್ನು ಸಚಿವರು ಪಡೆದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನವಿಲಗೋಣದಲ್ಲಿ ಕೆಲ ದಿನಗಳ ಹಿಂದೆ ನೆರೆಯಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದ ಕುಟುಂಬಗಳು ಮರಳಿ ಮನೆ ಸೇರಲು ನಿರಾಕರಿಸಿದ್ದರು. ಏಕೆಂದರೆ ಅವರಿಗೆ ಪ್ರತಿವರ್ಷ ನೆರೆ ಸಮಸ್ಯೆ ಕಾಡುತ್ತಿದ್ದು ಅವರನ್ನು ಬೇರೆಡೆಗೆ ನಿವೇಶನ ನೀಡಿ ಶಾಶ್ವತವಾಗಿ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿದ್ದರು. ನೆರೆ ಸಂತ್ರಸ್ತರ ಬೇಡಿಕೆ ಬಗ್ಗೆ ಗಮನಹರಿಸುವಂತೆ ಸಚಿವರನ್ನು ವಿನಂತಿಸಿದರು. ಪ್ರತಿಕ್ರಿಯಿಸಿದ ಸಚಿವ ಪೂಜಾರಿ ಈ ಬಗ್ಗೆ ಸದ್ಯವೇ ಪ್ರತ್ಯೇಕ ಸಭೆ ಕರೆದು ಪರಿಹಾರ ಕ್ರಮದ ಬಗ್ಗೆ ಚರ್ಚಿಸೋಣ ಎಂದರು.
ಜಿಪಂ ಮಾಜಿ ಸದಸ್ಯ ಗಜು ಪೈ ಮಾತನಾಡಿ ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆಗಳಿಗೆ ತೀವ್ರ ಹಾನಿಯಾಗುತ್ತಿದ್ದರೂ ಇಲಾಖೆಯಿಂದ ಹಾನಿ ಸಮೀಕ್ಷೆ ನಡೆಯುತ್ತಿಲ್ಲ. ಅಡಕೆಗೆ ಕೊಳೆ ವ್ಯಾಪಕವಾಗಿದೆ. ಬೆಲೆ ವಿಮೆ ಮಾಡಿಸಿದ್ದರೂ ಅದರ ಮಾನದಂಡಗಳು ವ್ಯತಿರಿಕ್ತವಾಗಿದ್ದು ಹಲವು ಸಂದರ್ಭದಲ್ಲಿ ವಿಮೆ ಪರಿಹಾರ ಪಡೆಯುವುದು ರೈತನಿಗೆ ಕಷ್ಟಸಾಧ್ಯವಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಎಡಿಸಿ ಮೊಗೇರ, ತಹಸೀಲ್ದಾರ್ ವಿವೇಕ ಶೇಣ್ವಿ, ಪ್ರಭಾರ ಇಒ ನಾಗರತ್ನಾ ನಾಯಕ, ಆಡಳಿತಾಧಿಕಾರಿ ಎನ್. ಜಿ ನಾಯಕ, ಡಿಡಿಪಿಐ ಈಶ್ವರ ನಾಯ್ಕ ಇನ್ನಿತರರು ಇದ್ದರು.