ಹೊನ್ನಾವರ: ತಾಲೂಕಿನ ಕಡತೋಕಾ, ಮಾಡಗೇರಿ, ಗುಡ್ಡಿನಕಟ್ಟು, ಕೆಕ್ಕಾರ ಭಾಗಗಳಲ್ಲಿ ವಿಪರೀತ ಪ್ರವಾಹ ಉಂಟಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಪರೀತ ಮಳೆಯಿಂದಾ, ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಕೆಕ್ಕಾರ ಹೂಜಿಮುರಿ, ಮಾಡಗೇರಿ, ಗುಡ್ಡಿನಕಟ್ಟು, ಕೆಕ್ಕಾರ ಭಾಗಗಳಲ್ಲಿ ಪ್ರತೀ ಬಾರಿಯೂ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನರ ಬದುಕು ಮುರಾಬಟ್ಟೆಯಾಗಿದೆ. ಹಲವಾರು ವರ್ಷಗಳಿಂದಲೂ ಈ ಭಾಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈವರೆಗೂ ಆಗದಿರುವುದು ದುರಂತ. ಮಳೆಗಾಲ ಬಂತೆಂದರೆ ನೆರೆಹಾವಳಿ, ಬೇಸಿಗೆ ಬಂತೆಂದರೆ ಕೃಷಿ ಜಮೀನಿಗೆ ಉಪ್ಪು ನೀರಿನ ಹಾವಳಿ ಎದುರಾಗಿ ಜನರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಸಂಬಂಧಿಸಿದ ಸರ್ಕಾರ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಒದಗಿಸಬೇಕು. ಹೂಜಿಮುರಿ ಭಾಗಕ್ಕೆ ಎತ್ತರ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಪ್ರವಾಹ ಉಂಟಾದ ಪ್ರದೇಶದ ಜನರನ್ನು ಸಂಬಂಧಿಸಿದ ಕಾಳಜಿ ಕೇಂದ್ರಕ್ಕೆ ಕರೆತರಲಾಗಿದ್ದು, ಕಾಳಜಿ ಕೇಂದ್ರಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.