ಆಷಾಢ
ಆಷಾಢಕೂ ಗಂಡಿಗೂ ಇಲ್ಲ ಅನುಬಂಧ
ಅದೆಲ್ಲ ಹೆಣ್ಮಕ್ಳ ಸ್ವತ್ತಂತೆ ದಿಟವೇನೋ.
ಹಕ್ಕುಂಟೆ ಇವಗೆ ಅವಳ ಖುಷಿಯಲ್ಲೂ.
ಕರ್ತವ್ಯಗಳು ಕಳೆಯೋ ದಾರೀಲಿ
ಆಷಾಢದಾ ವಿರಹ ಕಾಡದೇನು..?
ತನ್ನದೆಲ್ಲವ ಬಿಟ್ಟು ಗೊತ್ತಿರದ ಪಯಣದಲಿ
ಇನ್ಯಾರದೋ ಮನೆಗೆ ದೀಪವಾದಾಕೆ.
ಅಮ್ಮ ಅಪ್ಪನದೆಲ್ಲಾ ಕನಸಲ್ಲೇ ಭೇಟಿ
ದಾರಿಯೂ ದೂರ ಹೋಗಿ ಬರಲು.
ನನ್ನಾ ಬದಲಿಸೊ ಆಳಿರದ ಹೊತ್ತಲಿ..
ಕಳಿಸುವರೇ ಮನೆಮಂದಿ ತವರಿಗೆನ್ನ.?
ಹೋಗಿ ಬರಲೇ ಎಂದು ಕೇಳ್ಬೇಕು ಒಮ್ಮೆ
ನೋಡ್ಬೇಕು ಅತ್ತೆ ಕಳಿಸುವರೇ ಎಂದು..
ಆಷಾಢಕೇನೋ ಎಲ್ಲ ಹೋಗುವರಂತೆ
ಹಾಗೆಂದರೇನೆಂದು ಕೇಳುವವರೇ ಅಧಿಕ.
ಕರೆದು ಹೋಗಲು ಬರುವವರೇ ಇಲ್ಲಾ.
ದಿನಪೂರ್ತಿ ದುಡಿಯೆ ಮೈಯ್ಯ ಮುರಿದು
ನಾಳೆಯೆಣಿಕೆ ಮಾಡೋ ನಮಗ್ಯಾವ ತವರು.?
ಆಷಾಢದೊಳು ತುಂಬಿದರೆ ಜೇಬು
ತಪ್ಪೀತು ಉಪವಾಸ ಶ್ರಾವಣದಲ್ಲಿ.
ತವರು ಕಂಡಂದೇ ಆಷಾಢ ಮಾಸ
ವಿರಹಕ್ಕೆ ವ್ಯಾಖ್ಯಾನ್ನ ಸಿಗಬಹುದೇ ಇಲ್ಲಿ.?
-ಉದಯ್ ನಾಯ್ಕ್
ಊರಕೇರಿ.