ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಮೀನುಗಾರು ಮೀನುಗಾರಿಕೆ ಉದ್ದೇಶಕ್ಕಾಗಿ ವಿವಿಧ ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಕೆಡಿಸಿಸಿ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲವನ್ನು ಮನ್ನಾ ಮಾಡುವಂತೆ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಮನವಿ ಸಲ್ಲಿಸಿದರು.
ಕರಾವಳಿ ಭಾಗದಲ್ಲಿ ಕಡಲ ಮೀನುಗಾರಿಕೆ ಒಂದು ಉದ್ಯಮವಾಗಿದ್ದು, 2 ಲಕ್ಷಕ್ಕೂ ಅಧಿಕ ಜನರು ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 8 ಪ್ರಮುಖ ಮೀನುಗಾರಿಕಾ ಬಂದರುಗಳಿವೆ.
ಅಲ್ಲದೇ, ಹತ್ತು ಸಾವಿರ ನೋಂದಾಯಿತ ಮೀನುಗಾರಿಕಾ ದೋಣಿಗಳಿವೆ. ಮೆಟ್ರಿಕ್ ಟನ್‌ಗಳಷ್ಟು ಮೀನು ಉತ್ಪಾದನೆಯಾಗುತ್ತದೆ. ಜಿಲ್ಲೆಯಲ್ಲಿ 44 ಮೀನುಗಾರಿಕಾ ಪ್ರಾಥಮಿಕ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.
ಕಳೆದ ವರ್ಷ ಪ್ರವಾಹದಿಂದ ಮತ್ಯಕ್ಷಾಮ ಉಂಟಾಗಿತ್ತು ಹಾಗೂ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಮೀನುಗಾರರ ಜೀವನಸ್ಥಿತಿ ತೀರಾ ಹದಗೆಟ್ಟಿದೆ.
ಈ ಕಾರಣಕ್ಕೆ ಸಾಲ ಮರುಪಾವತಿ ಮಾಡಲು ಕಷ್ಟವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಾಗ ನೇಕಾರರ ಸಾಲ ಮನ್ನಾ ಮಾಡಿದಂತೆ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ್ದು, ಇದಕ್ಕೆ ಅನುದಾನವು ಬಿಡುಗಡೆಯಾಗಿರುತ್ತದೆ. ಆದರೆ, ಈ ಸಾಲ ಮನ್ನಾದ ಷರತ್ತುಗಳಿಗೆ ಜಿಲ್ಲೆಯಲ್ಲಿ 3 ಕೋಟಿವರೆಗೆ ಅಷ್ಟೇ ಅರ್ಹರಾಗಿರುತ್ತಾರೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ 57ಕೋಟಿ ರೂ. ಸಾಲಮನ್ನಾ ಆಗಿರುತ್ತದೆ. ಇದರಿಂದಾಗಿ ಜಿಲ್ಲೆಯ ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ಮೀನುಗಾರರಿಗೆ ಸಮಸ್ಯೆಯಾಗುತ್ತಿದ್ದು ಸಾಲ ಮನ್ನಾ ಮಾಡುವಂತೆ ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದರು.