ಕುಮಟಾ: ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ತಾಪಂ ಸಾಮಾನ್ಯ ಸಭೆ ನಡೆಯಿತು.ಈ ವೇಳೆ ಗೋಕರ್ಣದಲ್ಲಿ ಹೊರರಾಜ್ಯ ಹಾಗೂ ವಿದೇಶದಿಂದ ಬರುವವರ ಮೇಲೆ ಯಾವುದೇ ನಿಗಾ ಇಲ್ಲದಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಸದಸ್ಯ ಮಹೇಶ ಶೆಟ್ಟಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಕರೊನಾ ಹೋರಾಟದಲ್ಲಿ ಗೋಕರ್ಣವನ್ನು ವಿಶೇಷವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ಗೋಕರ್ಣದಲ್ಲಿ ಬುಧವಾರ ವಿದೇಶಿ ಮಹಿಳೆಯೊಂದಿಗೆ ಬಂದಿದ್ದ ವ್ಯಕ್ತಿ ಸತ್ತಾಗ ಅವರ ಬಗ್ಗೆ ಯಾವುದೇ ಮಾಹಿತಿ ತಾಲೂಕಾಡಳಿತದ ಬಳಿ ಇರಲಿಲ್ಲ. ಅವರು ಸಿ-ಫಾರ್ಮ ತುಂಬದೇ ಕಾಟೇಜ್ನಲ್ಲಿದ್ದರು. ಮುಖ್ಯವಾಗಿ ಮಹಾರಾಷ್ಟ್ರವೂ ಸೇರಿ ಹೊರ ರಾಜ್ಯಗಳಿಂದ ಗೋಕರ್ಣಕ್ಕೆ ಬಂದು ಕ್ರಿಯಾಕರ್ಮಗಳನ್ನು ಮಾಡಿಸಿಕೊಂಡು ಮೂರ್ನಾಲ್ಕು ದಿನದಲ್ಲಿ ಜನ ಮರಳಿ ಹೋಗುತ್ತಿದ್ದಾರೆ. ಕ್ರಿಯಾಕರ್ಮಕ್ಕೆ ಬಂದಿದ್ದರಲ್ಲಿ ಯಾರಾದರೂ ಕರೊನಾದಿಂದಲೇ ಸತ್ತವರಾಗಿದ್ದರೆ ಗುರುತಿಸುವವರು ಯಾರು ಎಂಬುದೇ ಪ್ರಶ್ನೆ. ಹೊರಗಿನಿಂದ ಬಂದವರ ಬಗ್ಗೆ ಯಾವ
ಮಾಹಿತಿಯನ್ನೂ ಪಡೆಯಲಾಗುತ್ತಿಲ್ಲ. ಇದು ಕರೊನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ವೈಫಲ್ಯತೆಯನ್ನು ಎದುರು ನೋಡಬೇಕಾದ ದಿನಗಳಿಗೆ ಕರೆದೊಯ್ಯುತ್ತ್ತಿದೆ. ವ್ಯವಸ್ಥೆಯ ದೊಡ್ಡ ಲೋಪ ಇದು ಎಂದರು.
ಗೋಕರ್ಣ ಸುತ್ತಮುತ್ತಲ ಪ್ರದೇಶದಲ್ಲಿ ಸಿಆರ್ಝೆಡ್ ಉಲ್ಲಂಘಿಸಿದ ೭೫ಕ್ಕೂ ಹೆಚ್ಚು ಅನಕೃತ ರೆಸಾರ್ಟಗಳಲ್ಲಿ ಮದ್ಯ ಮಾರಾಟವೂ ನಡೆದಿದೆ. ಸಂಬಂಧಪಟ್ಟ ಇಲಾಖೆ ಅಬಕಾರಿಗಳು ಜೇಬು ತುಂಬಿಸಿಕೊಂಡು ತಣ್ಣಗಿದ್ದಾರೆ ಎಂದು ಆರೋಪಿಸಿದರಲ್ಲದೇ ಇಂದಿನ ಸಭೆಗೆ ಸಿಪಿಐ, ತಹಸೀಲ್ದಾರ್ ಅನುಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಗೋಕರ್ಣ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷಿ ಬಡ್ತಿ ಮಾತನಾಡಿ, ಲಾಕ್ಡೌನ್ ಸಡಿಲಿಕೆಯ ಬಳಿಕ ಇಲ್ಲಿನ ಚೆಕ್ಪೋಸ್ಟ ಕೂಡಾ ಇಲ್ಲ. ಹೀಗಾಗಿ ಪ್ರವಾಸಿಗರ ಮಾಹಿತಿ ದಾಖಲಾತಿ ಇಲ್ಲ. ಕೂಡಲೇ ಇಲ್ಲಿನ ಎಲ್ಲ ರೆಸಾರ್ಟ್ಗಳನ್ನು ತಪಾಸಣೆ ಮಾಡಬೇಕು ಎಂದರು.
ತಹಸೀಲ್ದಾರ್ ಹಾಗೂ ಪೊಲೀಸರ ಕಾರ್ಯವೈಖರಿ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಸದಸ್ಯ ಜಗನ್ನಾಥ ನಾಯ್ಕ, ಬಾಡದ ರೆಸಾರ್ಟಗೆ ತಡರಾತ್ರಿ ಹೊರ ದೇಶದವರನ್ನು ಕ್ವಾರಂಟೈನ್ಗೆ ಕಳುಹಿಸುವ ತಹಸೀಲ್ದಾರ್ರ ಸರ್ವಾಽಕಾರಿ ಧೋರಣೆಗೆ ಜನ ಪ್ರತಿಭಟಿಸಬೇಕಾಯಿತು. ತಾಲೂಕಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ತಾರತಮ್ಯ ಮಾಡುತ್ತಿದ್ದರೆ ಉಪಯೋಗವಿಲ್ಲ ಎಂದರು.
ತಾಲೂಕು ಆರೋಗ್ಯಾಕಾರಿ ಡಾ. ಆಜ್ಞಾ ನಾಯಕ ಮಾತನಾಡಿ, ಮೊದಲು ಗೋಕರ್ಣದ ಸ್ಥಳೀಯ ಜನತೆಗೆ ನಿರ್ಬಂಧಿತ ರಾಜ್ಯಗಳಿಂದ ಪ್ರವಾಸಿಗರ ಆಗಮನದ ಅಪಾಯದ ಅರಿವಿರಬೇಕು. ಪ್ರತಿನಿತ್ಯ ಅಪಾರ ಪ್ರವಾಸಿಗರು ಬಂದುಹೋಗುವ ಹಾಗೂ ಚೆಕ್ಪೋಸ್ಟ ಕೂಡಾ ಇಲ್ಲದ ಗೋಕರ್ಣದಲ್ಲಿ ಎಲ್ಲವನ್ನೂ ಕರೊನಾ ಸೇನಾನಿಗಳು ನಿಗಾವಹಿಸುವುದು ಅಸಾಧ್ಯ ಎಂದರು. ಬಳಿಕ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು ಗೋಕರ್ಣದಲ್ಲಿ ಮೊದಲಿನಂತೆ ಚೆಕ್ಪೋಸ್ಟ ಅಳವಡಿಕೆಗೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಠರಾಯಿಸಲಾಯಿತು.
ಬಿಇಓ ರಾಜೇಂದ್ರ ಎಲ್ ಭಟ್ಟ ಅವರು ಶಾಲಾ ಆವಾರದಿಂದ ೨೦೦ಮೀ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ತಡೆಯಬೇಕಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ ನಾಯಕ, ಜಗನ್ನಾಥ ನಾಯ್ಕ , ಈಶ್ವರ ನಾಯ್ಕ ಇನ್ನಿತರ ಸದಸ್ಯರು ಮಾತನಾಡಿ, ಶಾಲೆ ಸನಿಹದಲ್ಲಿ ಕೇವಲ ತಂಬಾಕು ಉತ್ಪನ್ನ ಮಾತ್ರವಲ್ಲ, ಮದ್ಯ ಮಾರಾಟವೂ ನಡೆಯುತ್ತದೆ. ಇದನ್ನೆಲ್ಲಾ ತಡೆಯುವವರು ಯಾರು? ಕಾನೂನು ಪುಸ್ತಕದಲ್ಲಿದ್ದರೆ ಸಾಲದು, ಅಽಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.
ಅಧ್ಯಕ್ಷೆ ವಿಜಯಾ ಪಟಗಾರ ತಾಪಂ ವಾರ್ಷಿಕ ಆಯವ್ಯಯ ಮಂಡಿಸಿದರು. ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದರು. ಉಪಾಧ್ಯಕ್ಷೆ ಗೀತಾ ಮುಕ್ರಿ, ಸದಸ್ಯ ಈಶ್ವರ ನಾಯ್ಕ, ನೀಲಾಂಬಿಕಾ ನಾಯಕ, ಯಶೋದಾ ಶೆಟ್ಟಿ, ಪಾರ್ವತಿ ಗೌಡ, ನಾಗರತ್ನಾ ನಾಯ್ಕ ಇನ್ನಿತರರು ಇದ್ದರು.