ಕುಮಟಾ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮಳೆಗಾಲ ಆರಂಭವಾದರೂ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಗಟಾರಗಳ ಸ್ವಚ್ಛತಾ ಕಾರ್ಯ ಮುಗಿಯದ ಬಗ್ಗೆ ಕಾರಣ ಕೇಳಿದರು. 15 ದಿನಗಳ ಮೊದಲೇ ಮಳೆಗಾಲದ ಸಿದ್ಧತೆ ಮುಗಿದಿರಬೇಕು. ನೀವು ಕನಿಷ್ಠ ಯೋಚನೆಯನ್ನೂ ಮಾಡುವುದಿಲ್ಲ. ಮಳೆಗಾಲಕ್ಕೂ ಪೂರ್ವದಲ್ಲೇ ಗಟಾರಗಳನ್ನು ಸ್ವಚ್ಛತೆ ಮಾಡಿದರೆ ಪಟ್ಟಣ ವ್ಯಾಪ್ತಿಯ 70% ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕು. ಕೃಷಿಗೆ ಹೆಚ್ಚಿನ ಒತ್ತು ನೀಡಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಅಂಗನವಾಡಿ ಮತ್ತು ಶಾಲೆಗಳ ಅಭಿವ್ರದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದ ಸಚಿವರು, ವಸತಿ ಯೋಜನೆಯ ಸೌಲಭ್ಯ ಹಲವರಿಗೆ ಸಿಗದ ಬಗ್ಗೆ ಕಾರಣ ಕೇಳಿದರು. ಫಲಾನುಭವಿಗಳ ಹೆಸರಲ್ಲೇ ಪಹಣಿ ಇರಬೇಕಂತಿಲ್ಲ. ಆಧಾರ್, ಜಿಪಿಎಸ್ ಸೇರಿದಂತೆ ಕಾಗದ ಪತ್ರಗಳಿದ್ದರೆ ಅಂಥವರಿಗೆ ಸೌಲಭ್ಯಗಳನ್ನು ತಕ್ಷಣ ಒದಗಿಸಿ. ಜನಸಾಮಾನ್ಯರನ್ನು ಸಬೂಬು ಹೇಳಿ ಸತಾಯಿಸಬೇಡಿ ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಗೆ ತಿಳಿಸಿದರು.
ಹೆಸ್ಕಾಂ, ಆರೋಗ್ಯ ಇಲಾಖೆ, ಪಿಡಬ್ಲೂಡಿ, ತೋಟಗಾರಿಕೆ ಮುಂತಾದ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿ ಮಾಹಿತಿ ಪಡೆದರು.
ಮಳೆಗಾಲದ ಸಿದ್ಧತೆ ಬಗ್ಗೆ ತಾಲ್ಲೂಕಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಉಪವಿಭಾಗಾಧಿಕಾರಿ ಎಂ.ಅಜಿತ್ ರೈ, ʼಹಿಂದಿನ ಬಾರಿ 25 ಗಂಜಿಕೇಂದ್ರಗಳನ್ನು ತೆರೆದಿದ್ದೆವು. ನೀರು ನುಗ್ಗಿದ ಮನೆಗಳಿಗೆ ತಲಾ 10 ಸಾವಿರ ರೂ. ಸೇರಿದಂತೆ ಮಳೆಗಾಲದಲ್ಲಿ ಸಂಭವಿಸಿದ ವಿವಿಧ ಹಾನಿಗಳಿಗೆ ಪರಿಹಾರ ಧನವನ್ನು ವಿತರಣೆ ಮಾಡಲಾಗಿದೆ. ಈ ವರ್ಷ ಎಲ್ಲಾ ಗ್ರಾ.ಪಂ.ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಅರಣ್ಯ ಇಲಾಖೆಗೆ ಹೆದ್ದಾರಿ ಪಕ್ಕದಲ್ಲಿ ಗುಡ್ಡ ಕುಸಿಯುವ ಭಾಗಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆʼ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ ಸ್ವಾಗತಿಸಿದರು. ಶಾಸಕ ದಿನಕರ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವಿಜಯಾ ಪಟಗಾರ, ತಹಶೀಲ್ದಾರ ಮೇಘರಾಜ ನಾಯ್ಕ, ಡಿವೈಎಸ್ಪಿ ನಿಖಿಲ್ ಇದ್ದರು.