Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಜಿಲ್ಲೆಯ 14 ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಚಿಕಿತ್ಸೆಗೆ ಸರಕಾರ ನೀಡಿದೆ ಅನುಮತಿ

ಕಾರವಾರ: ಕೊರೋನಾ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌- 19 ಚಿಕಿತ್ಸೆಗೆ ಅವಕಾಶ ನೀಡಲು ಅನುಮತಿಸಿದೆ. ಅದರಂತೆ, ‌ಜಿಲ್ಲೆಯ 14 ಆಸ್ಪತ್ರೆಗಳಲ್ಲಿ ಇನ್ಮುಂದೆ ಕೊರೋನಾಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್, ಡಾ.ಜಾನು ಮಣಕೀಕರ್ಸ್ ಮೆಟರ್ನಿಟಿ ಆ್ಯಂಡ್ ನರ್ಸಿಂಗ್ ಹೋಮ್, ಅಚ್ಯುತ್ ಪಂಡಿತ್ ಹಾಸ್ಪಿಟಲ್, ರಾಮಲೀಲಾ ಹಾಸ್ಪಿಟಲ್, ಹೈಟೆಕ್ ಲೈಫ್ ಲೈನ್, ಹೊನ್ನಾವರದ ಶ್ರೀದೇವಿ ನರ್ಸಿಂಗ್ ಹೋಮ್, ಸೇಂಟ್ ಇಗ್ನೇಷಿಯಸ್ ಹಾಸ್ಪಿಟಲ್, ಡಾ.ವಿ.ಕೆ.ಬಿ ಬಳ್ಕೂರ್ ಮೆಮೋರಿಯಲ್ ಹಾಸ್ಪಿಟಲ್, ಶಿರಸಿಯ ವಿಶ್ವ ಸೇವಾ
 ಸಮಿತಿ ರೋಟರಿ ಚಾರಿಟೇಬಲ್ ಆಸ್ಪತ್ರೆ, ಟಿ.ಎಸ್.ಎಸ್ ಆಸ್ಪತ್ರೆ, ಕಾರವಾರದ ಶೆಟ್ಟಿ ಕಣ್ಣಿನ ಆಸ್ಪತ್ರೆ, ಮುರುಡೇಶ್ವರದ ಆರ್.ಎನ್.ಎಸ್. ಹಾಸ್ಪಿಟಲ್, ಯಲ್ಲಾಪುರದ ಸಾಯಿ ನೇತ್ರಾಲಯದಲ್ಲಿ ಕೋವಿಡ್- 19 ಚಿಕಿತ್ಸೆ ಪಡೆಯಬಹುದಾಗಿದೆ ಎನ್ನಲಾಗಿದೆ

ಟ್ರೀಟ್ಮೆಂಟ್ ಗೆ ಹಣ ಕೊಡ್ಬೇಕು: 
ರಾಜ್ಯ ಸರ್ಕಾರ ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್- 19 ಸೋಂಕಿತರಿಗೆ ಚಿಕಿತ್ಸೆ ನೀಡಿತ್ತು. ಆದರೆ, ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ಚಿಕಿತ್ಸಾ ವೆಚ್ಚವನ್ನು ಸೋಂಕಿತರೇ ಭರಿಸಬೇಕಿದೆ.

ಮೂಲಗಳ ಪ್ರಕಾರ, ಶೇ 70ರಷ್ಟು ರೋಗಿ ಹಾಗೂ ಶೇ 30ರಷ್ಟು ವೆಚ್ಚವನ್ನು ಸರ್ಕಾರ ಭರಿಸಲಿದೆ ಎನ್ನಲಾಗಿದೆ. ಜತೆಗೆ, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಅಡಿ ಈ ಸಾಂಕ್ರಾಮಿಕ ರೋಗವನ್ನು ಸೇರ್ಪಡೆ ಮಾಡಲಾಗುತ್ತದೆ ಎನ್ನಲಾಗಿದೆ.

ದರ‌ ನಿಗದಿ:
 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ದಿನಕ್ಕೆ ಜನರಲ್‌ ವಾರ್ಡ್‌ ಗೆ ಚಿಕಿತ್ಸಾ ವೆಚ್ಚ 5,200 ರೂ. ನಿಗದಿ ಮಾಡಲಾಗಿದ್ದು, ಐಸೋಲೇಶನ್‌ ವಾರ್ಡ್‌ ಗೆ ಪ್ರತಿ ದಿನಕ್ಕೆ 8,500 ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗೆಯೇ ಗಂಟಲು ದ್ರವ ಪರೀಕ್ಷೆಗೆ 2600 ರೂಪಾಯಿ, ಜನರಲ್‌ ವಾರ್ಡ್‌ ವಿಥ್ ಆಕ್ಸಿಜನ್‌ ಗೆ 7,500 ರೂಪಾಯಿ, ಐಸಿಯು ವಿಥ್ ವೆಂಟಿಲೇಟರ್‌ ಗೆ 12,000 ರೂ.ಅನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ಈ ಬಗ್ಗೆ ಇನ್ನೂವರೆಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ.

ನಿಗದಿತ ದರಕ್ಕಿಂತ ಹೆಚ್ಚು ಪಡೆದರೆ  ಕಾನೂನಿನ ಕ್ರಮ
 
ಏಕರೂಪದ ದರ ನಿಗದಿಯಾದ ನಂತರ, ಸೂಚಿತ ದರ ಮೀರಿ ಸುಲಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಹಾಗೂ ಚಿಕಿತ್ಸೆಗೆ ಯಾವುದೇ ಆಸ್ಪತ್ರೆಗೆ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಒಂದೇ ಒಂದು ನಯಾ ಪೈಸೆ ಹೆಚ್ಚುವರಿ ಹಣ ಪಡೆಯುವಂತಿಲ್ಲ. ಒಂದು ವೇಳೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅಂತಹ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ನೂತನ ಮಾರ್ಗ ಸೂಚಿಯಲ್ಲಿದೆ