ಬಾಲ್ಯದ ಬದುಕು
ಬಾಲ್ಯ ಚಂದ ಅನ್ನೋ
ಮಂದಿ ಸಾಲಲಿ ನಾನೂ..
ಕಹಿ ನೆನಪಿನೊರತೆಗೆ
ಬೆರಳಿಟ್ಟು ಬಂಧಿಸಿಹ ಬದಲು
ಮೂಡಿಹುದೇ ಮೆದುಳಲಿ
ಪಕ್ವ ಗೆರೆಯೊಂದು.. ?
ಕೆಂಪು ಮಣ್ಣಿನ ಕಂಪ ಹೀರಿ
ಒಣ ಸಿಂಬಳದ ರಟ್ಟು
ಕಿತ್ತು ಒಸರೋ ಕೆಂಪ ನೆತ್ತರ..
ಒತ್ತಿ ಹಿಡಿವ ಪಟ್ಟಿ ಹಾಳೆಯ
ಪುಟ್ಟ ಚೂರೇ ಅಮ್ಮ..
ರೋಡಲ್ಲಿ ಅರ್ಧ ಮುಖವೆತ್ತಿ
ಹಾಯೋ ಹೋರಿಯ
ಚೂಪು ಕೊಂಬಿನ ಕಲ್ಲಿಗೂ
ಎಳೆಯ ಕಾಲ ಹೆಬ್ಬೆರಳಿಗೂ
ಎಲ್ಲಿಯದಿದು ನಂಟು..?
ಜಡ್ದಡರದ ಮೊಣಕಾಲ ಗಾಯ
ನಗುವ ಹೆಬ್ಬೆರಳ ಉಗುರಲಿ
ತುದಿ ಕಿತ್ತು ಊದಿ ತೆಗೆದ
ಬರೆವ ಪೆನ್ನಿನ ಕೆಂಪು,
ನೀಲಿ ಶಾಯಿಯ ನರ್ತನ..
ನಮ್ಮ ಬಾಲ್ಯ ದರ್ಬಾರಿನೊಳು
ಬೆಲೆಯಿರದ ದುಡ್ಡಿಗೆ ಬರವಿತ್ತು.
ಬೆಂಕಿಪಟ್ನದ ಚಿತ್ರ, ಸ್ಟಾರು,
ಬ್ರಿಸ್ಟಾಲ್ ಪ್ಯಾಕ ಚೂರು..
ಪಾನ್ಕಿಂಗ ಕವರಿಗೇ ಚಾಪ ರೇಸು.
ಗೇರ್ಬೀಜ ಇದ್ದವನೇ ಬಾಸು..
ಬರಗಾಲದ ಬಾಲ್ಯ ಶಪಿಸಿ
ಬೇಗ ಬೆಳೆಯಬೇಕೆಂದೆ..
ಕಳೆದ ದಿನಗಳ ಹಿಂದೆ
ಪೇರಿ ಕಿತ್ತ ನೆಮ್ಮದಿಯ ಕಂಡು
ಹವ್ಯಾಸವಾಗಿದೆ ನೆನಪು
ಮತ್ತೆ ಬರದ ಬಾಲ್ಯ ಬಯಸಿ...
-ಉದಯ್ ನಾಯ್ಕ್
ಊರಕೇರಿ