ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನದಿಂದ ಹೆಚ್ಚಾಗುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಚರ್ಚೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಮೇ 16 ರ ಬೆಳಿಗ್ಗೆ 10 ರಿಂದಲೇ ಹಲವು ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾದ ಶಿವರಾಂ ಹೆಬ್ಬಾರ ಹೇಳಿದರು. ಈ ಬಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ್ದಾರೆ.
ಮದುವೆ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದ್ದು ಹೊಸದಾಗಿ ಮದುವೆ ಆಯೋಜಿಸಲು ಸಲ್ಲಿಕೆಯಾಗುವ ಅರ್ಜಿಗಳಿಗೆ ಅನುಮತಿ ನಿರಾಕರಿಸಲಾಗಿದೆ. ಈ ಮೊದಲು ಅನುಮತಿ ನೀಡಲಾಗಿರುವ ಮದುವೆಗಳಲ್ಲಿ 40 ಜನರ ಬದಲು ಕೇವಲ 20 ಜನ ಭಾಗವಹಿಸಬಹುದು. ಅಲ್ಲದೆ, 20 ಕ್ಕಿಂತ ಹೆಚ್ಚು ಜನ ಮದುವೆಗೆ ಸೇರಿಲ್ಲ ಎಂಬುದನ್ನು ಸಂಬoಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕಿದೆ. ಸ್ಥಳಕ್ಕೆ ಭೇಟಿ ನೀಡಿ ವೀಡಿಯೋ ಚಿತ್ರೀಕರಣ ಮಾಡಿಕೋಳ್ಳುವುದು ಅವಶ್ಯಕವಾಗಿದೆ.
ಕರ್ಫ್ಯೂ ಸಮಯದಲ್ಲಿ ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ, ಎರಡೂ ವಿಭಾಗಗಳ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಅಧಿಕೃತ ಗುರುತಿನ ಚೀಟಿ ಹೊಂದಿರುವ ಸರ್ಕಾರಿ ನೌಕರರನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಆದರೆ, ವೈದ್ಯಕೀಯ ತುರ್ತು ಸೇವೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸಚಿವ ಹೆಬ್ಬಾರ ತಿಳಿಸಿದ್ದಾರೆ.
ಒಂದೆಡೆ 40ಕ್ಕಿಂತ ಹೆಚ್ಚು ಕೋವಿಡ್ ಸಕ್ರೀಯ ಪ್ರಕರಣಗಳಿದ್ದರೆ, ಅದನ್ನು ವಿಶೇಷ ಕಂಟೈನ್‌ಮೆoಟ್ ಪ್ರದೇಶವೆಂದು ಗುರುತಿಸಬೇಕು ಎಂದು ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.