ಕುಮಟಾ: ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಇಂದು ಸಂಪೂರ್ಣವಾಗಿ ನಿರ್ಜನವಾಗಿದ್ದು, ಮನೆ ಮನೆಗೆ ಆಟೋ ಮೂಲಕ ತರಕಾರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ದಿನಸಿ ಸಾಮಾನು ಕೂಡ ಅವಶ್ಯಕತೆ ಇದ್ದವರಿಗೆ ಅಂಗಡಿ ವರ್ತಕರು ಮನೆ ಮನೆಗೆ ತಲುಪಿಸು ವ್ಯವಸ್ಥೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಸಂಬಂಧಪಟ್ಟ ಪಿಡಿಒ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವ ಜವಾಬ್ದಾರಿ ನೀಡಲಾಗಿದ್ದು, ಬೀದಿ ಬದಿಯಲ್ಲಿ ಯಾವುದೇ ಮಾರಾಟ ಮಾಡಲು ಅವಕಾಶ ನೀಡಿಲ್ಲ. ಯಾವುದೇ ಅನಾವಶ್ಯಕ ವಾಹನ ಸಂಚಾರ ಕಂಡುಬರಲಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದು, ಪಟ್ಟಣದ ಸುತ್ತ, ಗಿಬ್ ಸರ್ಕಲ್, ಹೆಗಡೆ ಸರ್ಕಲ್, ಬಸ್ ಸ್ಟ್ಯಾಂಡ್, ಮೂರುಕಟ್ಟೆ, ಮೀನು ಮಾರುಕಟ್ಟೆಗಳಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಇನ್ನು ಅನಾವಶ್ಯಕವಾಗಿ ಓಡಾಡಲು ಬಂದಿದ್ದ ಸುಮಾರು 15 ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದ್ದು, ತುರ್ತು ಕೆಲಸಕ್ಕೆ, ಸರ್ಕಾರಿ ಕೆಲಸಕ್ಕೆ ಹೋಗುವವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ವಯಸ್ಸಾದವರಿಗೆ, ವೈದ್ಯಕೀಯ ತುರ್ತು ಇದ್ದವರಿಗೆ ಪೊಲೀಸ್ ಇಲಾಖೆಯವರೇ ಆಟೋ ರಿಕ್ಷಾ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟಾರೆ ಕುಮಟಾ ಪೊಲೀಸ್ ಕಟ್ಟುನಿಟ್ಟಿನ ಕಾರ್ಯದಿಂದ ಮೊದಲ ದಿನದ ಲಾಕ್ ಡೌನ್ ಸಂಪೂರ್ಣ ಯಶಸ್ವಿ ಆಗಿದ್ದು, ಪೊಲೀಸರ ಇಂದಿನ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ.