ಕುಮಟಾ: ಪತ್ರಿಕಾ ರಂಗಕ್ಕೆ ತನ್ನದೇ ಆದ ವಿಶೇಷ ಸ್ಥಾನ-ಮಾನವಿದ್ದು, ಸಮಾಜ ತಿದ್ದುವ ಕಾರ್ಯವನ್ನು ಇಂದಿನ ಮಾಧ್ಯಮ ಸಂಸ್ಥೆಗಳು ಮಾಡುತ್ತಿದೆ ಎಂದು ಸಹಾಯಕ ಆಯುಕ್ತ ಎಂ.ಅಜಿತ್ ಹೇಳಿದರು.
ಅವರು ಗುರುವಾರ ಕುಮಟಾ ಪಟ್ಟಣದ ಪುರಭವನದ ಸಮುದಾಯ ಭವನದಲ್ಲಿ ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ಮುಖ್ಯವಾಗಿತ್ತು. ಬ್ರಿಟೀಷರ ಆಡಳಿತ ವ್ಯವಸ್ಥೆಯ ಕುರಿತು ಜನಸಾಮಾನ್ಯರು ಎಚ್ಚರಗೊಳ್ಳಲು ಪತ್ರಿಕೆಗಳು ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದೆ. ಬ್ರಿಟೀಷರ ವಿರುದ್ಧ ಮುದ್ರಣ ಮಾಡುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು.
ನಂತರ ಪ್ರಾಂತ್ಯ ಭಾಷೆಯಲ್ಲಿ ಪತ್ರಿಕೆಗಳು ಮುದ್ರಣವಾದ ಸಂದರ್ಭದಲ್ಲಿ ಬ್ರಿಟಿಷರಿಗೆ ಮತ್ತಷ್ಟು ಭಯ ಉಂಟಾಗಿತ್ತು. ಇಂಗ್ಲೀಷ್ ಪತ್ರಿಕೆಗಳ ಹೊರತಾಗಿಯೂ ವಿಭಿನ್ನ ಭಾಷೆಗಳಲ್ಲಿ ಪತ್ರಿಕೆಗಳು ಮುದ್ರಣಗೊಂಡಾಗ ಪತ್ರಿಕಾ ರಂಗವು ತನ್ನ ಕ್ಷೇತ್ರವನ್ನು ವಿಸ್ತರಿಸಿ, ಸಮಾಜದಲ್ಲಿ ತಳಸಾಧಿಸಲು ಸಾಧ್ಯವಾಗಿತು ಎಂದರು.
ಅಧಿಕಾರಿಗಳು ಮತ್ತು ಸಾರ್ವಜನಿಕ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಗೆ ಕೆಲ ಸಾಮಾಜಿಕ ಜವಾಬ್ದಾರಿಗಳು ಇದೆ ಎಂಬುದನ್ನು ಪತ್ರಕರ್ತರು ಮರೆಯಬಾರದು ಎಂದ ಅವರು ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದಾರಿತಪ್ಪಿದ ಸಂದರ್ಭದಲ್ಲಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗುರುದತ್ತ ಶೇಟ್ ಮಾತನಾಡಿ, ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅರಣ್ಯ ನಾಶದಿಂದ ಹವಾಮಾನದಲ್ಲಿ ವೈಪರಿತ್ಯವನ್ನು ನಾವೆಲ್ಲರೂ ಗಮನಿಸಿದ್ದೇವೆ. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಿ.ಎಸ್.ಐ ರವಿ ಗುಡ್ಡಿ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿವೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ತಪ್ಪು ಸಂದೇಶಗಳು ಹರಿದಾಡುತ್ತವೆ. ಆದರೆ ಪತ್ರಿಕೆಗಳು ಸುದ್ದಿಯನ್ನು ಪರಾಮರ್ಶಿಸಿ, ನೈಜ ಸುದ್ದಿಗಳನ್ನು ಬಿತ್ತಿರಿಸುವ ಕೆಲ ಮಾಡುತ್ತಿದೆ ಎಂದರು .
ಕಸಾಪ ತಾಲೂಕಾಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಪತ್ರಿಕೆಗಳ ಜನ ಮಾನಸದಿಂದ ದೂರ ಸರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಕನ್ನಡ ಪತ್ರಿಕಾ ರಂಗವು ಕನ್ನಡ ಸಾಹಿತ್ಯ ಪರಿಷತ್‌ಗೆ ವಿಶೇಷ ಕೊಡುಗೆ ನೀಡಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ ಮಾತನಾಡಿ, ಕುಮಟಾ ಪತ್ರಕರ್ತರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಎಡವಿದ ಸಮಯದಲ್ಲಿ ಅವರನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ನೈಜ ಮತ್ತು ವಸ್ತುನಿಷ್ಠ ವರದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.
ವಲಯಾರಣ್ಯಾಧಿಕಾರಿ ಪ್ರವೀಣಕುಮಾರ ನಾಯಕ
ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಆನ್‌ಲೈನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪಟ್ಟಣದ ಸಿವಿಎಸ್‌ಕೆ ವಿದ್ಯಾರ್ಥಿನಿ ಸ್ರುಜನಾ ದತ್ತಾ ನಾಯಕ ವನ್ನಳ್ಳಿ ಹಾಗೂ ಹೆಗಡೆಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳು ಶಾಲೆಯ ವಿದ್ಯಾರ್ಥಿನಿ ಚಿತ್ರಾವತಿ ಮಾಸ್ತಿ ಮುಕ್ರಿ, "ಕಸ ವಿಂಗಡನೆ ಮತ್ತು ಪಟ್ಟಣದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರ" ವಿಷಯದಲ್ಲಿ ಸಿವಿಎಸ್‌ಕೆಯ ವಿದ್ಯಾರ್ಥಿನಿ ಸ್ರುಜನಾ ದತ್ತಾ ನಾಯಕ, ವನ್ನಳ್ಳಿ ಪ್ರಥಮ ಸ್ಥಾನ ಪಡೆದ, ದ್ವಿತೀಯ ಸ್ಥಾನ ಪಡೆದ ಸಿವಿಎಸ್‌ಕೆಯ ಅಕ್ಷತಾ ವಿನಾಯಕ ಶಾನಭಾಗ ಬಾಳೇರಿ ಮತ್ತು ತೃತೀಯ ಸ್ಥಾನವನ್ನು ಹೆಗಡೆಯ ಶಾಂತಿಕಾಂಬಾ ಹೈಸ್ಕೂಲ್‌ನ ವೇಣುಗೋಪಾಲ ಮಧುಕೇಶ್ವರ ಹೆಗಡೆ ಹಾಗೂ ಸಮಾಧಾನಕರ ಬಹುಮಾನ ಪಡೆದ ಸಿವಿಎಸ್‌ಕೆಯ ಎಚ್.ಜಿ.ಭೂಮಿಕಾ ವನ್ನಳ್ಳಿ, ಅಲ್ಲದೇ"ಅಪಾಯದಲ್ಲಿರುವ ಅರಣ್ಯ ಪರಿಸರ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ" ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳು ಶಾಲೆಯ ಚಿತ್ರಾವತಿ ಮಾಸ್ತಿ ಮುಕ್ರಿ, ದ್ವಿತೀಯ ಸ್ಥಾನ ಪಡೆದ ಧಾರೇಶ್ವರ ದಿನಕರ ಇಂಗ್ಲೀಷ್ ಮಿಡಿಯಮ್ ಹೈಸ್ಕೂಲ್‌ನ ಮಾನಸಾ ಗಣಪತಿ ಪಟಗಾರ ಮತ್ತು ತೃತೀಯ ಬಹುಮಾನ ಪಡೆದ ಹೆಗಡೆಯ ಕೆ.ಜಿ.ಎಸ್.ನ ಸುಹಾಸಿನಿ ಪೈ ಇವರಿಗೆ ಬಹುಮಾನ ವಿತರಿಸಿ, ಗೌರವಿಸಲಾಯಿತು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ರವಿ ಗಾವಡಿ, ಖಜಾಂಚಿ ರಾಘವೇಂದ್ರ ದಿವಾಕರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸುಬ್ರಾಯ ಭಟ್ಟ, ಪತ್ರಕರ್ತರಾದ ಪ್ರವೀಣ ಹೆಗೆಡೆ, ಸದಾನಂದ ದೇಶಭಂಡಾರಿ, ವಿನಾಯಕ ಬ್ರಹ್ಮೂರು, ಮಂಜುನಾಥ ಈರಗೊಪ್ಪ, ಯೋಗೇಶ ಮಡಿವಾಳ, ನಟರಾಜ ಗದ್ದೆಮನೆ, ಸಂತೋಷ ನಾಯ್ಕ, ಸೇರಿದಂತೆ ಸಂಘದ ಸದಸ್ಯರು, ಮಾಧ್ಯಮ ಕಚೇರಿಗಳ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಮಹೇಶ ಜೋಶಿ ನಿರೂಪಿಸಿದರು. ಪತ್ರಕರ್ತ ಅಮರನಾಥ ಭಟ್ಟ ವಂದಿಸಿದರು.