ಕುಮಟಾ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವಾರದಿಂದ ಭಾರಿ ಮಳೆಯಾಗುತ್ತಿದೆ. ಎಡಬಿಡದೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜೋರಾದ ಗಾಳಿ ಮಳೆಗೆ ಹತ್ತಾರು ಮನೆಗಳು, ಧರೆಗಳು ನೆಲಕ್ಕುರುಳುತ್ತಿದೆ. ರಕ್ಕಸದ ಅಲೆಗಳಿಗೆ ಕಡಲತೀರಗಳು ಕೊಚ್ಚಿ ಹೋಗಿ ಬಲೆ, ಬೋಟ್ ಗಳಿಗೆ ಸಾಕಷ್ಟು ಹಾನಿ ಸಂಭವಿಸಿದೆ.
ಜುಲೈ 27ರವರೆಗೂ ಧಾರಾಕಾರ ಮಳೆಯಾಗುವ ಮುನ್ಸೂಚನೆಯಿದ್ದು ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಉಡುಪಿ ದಕ್ಷಿಣಕನ್ನಡ ಜಿಲ್ಲೆಗಳಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕುಮಟಾ ತಾಲೂಕಿನ ಅಘನಾಶಿನಿ ನದಿ, ಉಕ್ಕಿ ಹರಿಯುತ್ತಿದ್ದು, ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು ನಿಗ್ಗಿದೆ. ಬಡಾಳ ಮಂಗಣೆ, ಸಂತೇಗುಳಿ, ದಿವಗಿ, ಮಿರ್ಜಾನ್, ಹೆಗಡೆ, ಕೋಡ್ಕಣಿಯಲ್ಲಿ ಮನೆ ಗಳಿಗೆ ನೀರು ನುಗ್ಗಿದೆ. ಇನ್ನೂ ದೀವಗಿ ಗ್ರಾಮ ಅಕ್ಷರಶಃ ನೀರಿನಲ್ಲಿ ಮುಳುಗಿದಂತೆ ಭಾಸವಾಗುತ್ತಿದೆ.
ಇನ್ನು ಕತಗಾಲನ ಚಂಡಿಕಾ ನದಿ ತುಂಬಿ ಹರಿದು ಕುಮಟಾ, ಸಿರ್ಸಿ ಸಂಪರ್ಕಿಸುವ ರಸ್ತೆ ಬಂದ್ ಆಗಿದಿದ್ದು ಸಾರ್ವಜನಿಕರು ಪರದಾಡುವಂತಾಯಿತು. ಅಳಕೊಡ್ ಭಾಗದ ನದಿ ತಟದ ತಗ್ಗು ಭಾಗಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಜಿ. ಪಂ ನಿಕಟಪೂರ್ವ ಸದಸ್ಯರಾದ ಗಜಾನನ ಪೈ ಭೇಟಿ ನೀಡಿ ಪರಿಶೀಲನೆ ನಡೆಸಿದರು
ದಿವಗಿಯ ಕೆಳಗಿನಕೇರಿಯಲ್ಲಿ ಮನೆಗೆ ಗಳಿಗೆ ನೀರು ಅವಾಂತರ ಸೃಷ್ಟಿಸುತ್ತಿದೆ. ಮುಂಗಾರು ಕೃಷಿಗೆ ಬಿತ್ತನೆ ಮಾಡಿದ , ಬತ್ತದ ಗದ್ದೆ ಸೇರಿದಂತೆ ಮನೆಗಳಿಗೂ ನೀರು ನುಗ್ಗಿದೆ. ಕೆಲವು ಭಾಗಗಳಲ್ಲಿ ಗಂಜಿ ಕೇಂದ್ರ ಆರಂಭವಾಗಿದೆ. ಅಘನಾಶಿನೀ ನದಿಯಲ್ಲಿ 1982 ರಲ್ಲಿ ನೀರು ತುಂಬಿದ ಮಟ್ಟಕ್ಕೆ ಇನ್ನು ಒಂದು ಅಡಿ ಬಾಕಿ.ಇನ್ನೂ ನಾಲ್ಕು ಅಡಿ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಜನ ಜೀವನ ಭಾಗಶಃ ಅಸ್ತವ್ಯಸ್ತಗೊಂಡಿದೆ. ಜುಲೈ 27ರವರೆಗೂ ಇದೇ ರೀತಿ ಹೆಚ್ಚಿನ ಮಳೆಯಾಗುವ ಸಂಭವವನ್ನು ಹವಾಮಾನ ಇಲಾಖೆ ತಿಳಿಸಿದೆ.