ಕುಮಟಾ : ತಾಲೂಕಿನ ಮಿರ್ಜಾನ್ ಗ್ರಾಮ ಪಂಚಾಯತ ವ್ಯಾಪ್ತಿಯ ಕೈರೆ ೨ ವಾರ್ಡಿನಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ನೂತನ ಅಂಗನವಾಡಿ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ದಿನಕರ ಶೆಟ್ಟಿ ನೆರವೇರಿಸಿದರು.
ನಂತರ ಮಾತನಾಡಿದ ಅವರು ನಮ್ಮ ಬಿಜೆಪಿ ಸರ್ಕಾರವು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎನ್ನುವುದಕ್ಕೆ ಕುಮಟಾ ತಾಲ್ಲೂಕಿಗೆ ಐದು ಅಂಗನವಾಡಿಗಳನ್ನು ನೀಡಿರುವುದಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಶಿಕ್ಷಣ ಆರಂಭಿಕ ದಿನಗಳಿಂದಲೇ ಉನ್ನತವಾಗಿರಲಿ ಎಂಬ ಉದ್ದೇಶ ಸರಕಾರದಾಗಿದೆ. ಮೊದಲ ಹಂತದಲ್ಲಿ ಹೆಗಡೆ ಗ್ರಾಮದಲ್ಲಿ ಅಜ್ಜಿಮನೆ ಮಾದರಿಯ ಅಂಗನವಾಡಿ ನಿರ್ಮಾಣ ಮಾಡಲಾಗಿದ್ದು. ಎರಡನೇ ಹಂತದಲ್ಲಿ ಒಟ್ಟು ಐದು ಅಂಗನವಾಡಿಗಳನ್ನು ನಿರ್ಮಿಸಲು ಹಣ ಮಂಜೂರು ಮಾಡಿದ್ದು ಸಂತಸದ ವಿಷಯ ವಾಗಿದೆ.
ಇಲ್ಲಿಯ ಸಿಡಿಪಿಒ ನಾಗರತ್ನ ನಾಯಕ ಅವರು ಕೂಡ ಹೆಚ್ಚಿನ ಆಸಕ್ತಿವಹಿಸಿ ಕಾರ್ಯ ನಿರ್ವಹಿಸುತ್ತಿದ್ದು, ಅಂಗನವಾಡಿಗಳ ಅಭಿವೃದ್ಧಿ ವಿಚಾರದಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಜೊತೆಗೆ ಶಿಕ್ಷಣದ ಕಾರಣದಿಂದಾಗಿ ಸುಸಜ್ಜಿತ ಅಂಗನವಾಡಿಗಳನ್ನು ನಿರ್ಮಿಸಲು ಶಾಸಕನಾಗಿ ನಾನೂ ಕೂಡ ಹೆಚ್ಚಿನ ಒತ್ತು ನೀಡಿದ್ದೇನೆ. ಶುರುವಿನಲ್ಲೆ ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಹಿನ್ನಡೆ ಆಗಬಾರದು ಎನ್ನುವ ಕಾರಣಕ್ಕೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ಗಳನ್ನು ವಿತರಿಸಲಾಗಿದೆ. ಕೊರೊನಾ ಅಲೆಗಳ ಪ್ರಭಾವದಿಂದ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ಸಿಗುವ ಕಾರಣ ಇವುಗಳ ಸದ್ಬಳಕೆ ವಿದ್ಯಾರ್ಥಿಗಳಿಂದ ಆಗಬಲ್ಲುದು ಎಂಬ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ ಪಟಗಾರ, ಸದಸ್ಯರಾದ ಗಣೇಶ ಅಂಬಿಗ, ಪರ್ಸು ಫರ್ನಾಂಡೀಸ್, ವಿನಾಯಕ ನಾಯ್ಕ, ಮಂಜುನಾಥ ಹರಿಕಾಂತ, ಮಂಜುನಾಥ ಮರಾಠಿ, ನಾಗರಾಜ ನಾಯ್ಕ, ಮಾಲತಿ ಅಂಬಿಗ, ಮಹಿಮುನ್ನಾ ಸಲೀಂ ಸಾಬ್, ದಿವಾಕರ ನಾಯ್ಕ ಇದ್ದರು..