ಕುಮಟಾ: ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡಾ ನೂರು ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ rank ಸಹಿತ ಐದು rank ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.
ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟೂ 89 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕುಮಾರಿ ದೀಪಿಕಾ ಸಂತೋಷ ಪ್ರಭು 625 ಅಂಕಗಳಿಗೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ rank ನೊಂದಿಗೆ ಉತ್ತಮ ಸಾಧನೆ ತೋರಿರುತ್ತಾಳೆ. ಅಲ್ಲದೇ ಆದಿತ್ಯ ಎ.ಜಿ.623, ಶ್ರವಣಕುಮಾರ್ ಎಂ. ಪಾಟೀಲ್ 623, ಡಿ.ಎಸ್.ದೀಕ್ಷಾ 622, ಮೇಘನಾ ಪ್ರಕಾಶ ನಾಯ್ಕ 618 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಕ್ರಮವಾಗಿ ಮೂರು, ನಾಲ್ಕು, ಎಂಟನೇ rank ಪಡೆದಿರುತ್ತಾರೆ. ಉಳಿದಂತೆ 35 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪೆಡದು ಉತ್ತೀರ್ಣರಾದರೆ 31 ವಿದ್ಯಾರ್ಥಿಗಳು ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಪಾಲಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.