ಕುಮಟಾ: ಮಳೆಗಾಲ ವೇಳೆಯಲ್ಲಿ ಪ್ರವಾಹ, ಪ್ರಕೃತಿ ವಿಕೋಪ, ವಿಪತ್ತು ಎದುರಿಸಲು ಮುಂಜಾಗ್ರತೆ ಸಲುವಾಗಿ ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯ ವ್ಯಾಪ್ತಿಯ ಸಂಪೂರ್ಣ ಮಾಹಿತಿ ಹಾಗೂ ಸಿದ್ಧತೆ ಮಾಡಿಕೊಂಡಿರಬೇಕು ಸ್ಥಳೀಯವಾಗಿ ಸುರಕ್ಷತಾ ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹೀಲನ್ ತಿಳಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಕುಮಟಾ ಉಪವಿಭಾಗ ಮಟ್ಟದ ಪ್ರವಾಹ ಮುಂಜಾಗ್ರತೆ ಸಭೆ ನಡೆಸಿದರು. ಹೇಗೋ ನಿಭಾಯಿಸುತ್ತೇವೆ ಎಂಬ ಅತಿವಿಶ್ವಾಸ ಬೇಡ, ನಿಮಗೆ ಕೊಟ್ಟ ಜವಾಬ್ದಾರಿಯ ಕ್ಷೇತ್ರವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ. ಅಗತ್ಯ ಸಾಮಗ್ರಿಗಳನ್ನು ಸಿದ್ಧ ಸ್ಥಿತಿಯಲ್ಲಿಟ್ಟುಕೊಳ್ಳಿ. ಬೋಟ್ ಇನ್ನಿತರ ಸುರಕ್ಷತೆಗಳ ಬಗ್ಗೆ ಎಚ್ಚರಿಕೆಯಿರಲಿ ಎಂದರು.
ಬಿಇಒ ರಾಜೇಂದ್ರ ಭಟ್ಟ ವಿವರಿಸಿ, ದೀಪಗ್ರಾಮ ಐಗಳಕುರ್ವೆಯಲ್ಲಿ ಪ್ರತಿವರ್ಷ ಪ್ರವಾಹ ಕಾಲದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮುಖ್ಯವಾಗಿ ತೀರಾ ಅಪಾಯಕಾರಿ ಮಟ್ಟಕ್ಕೆ ಏರುವವರೆಗೂ ಸ್ಥಳೀಯರಲ್ಲಿ ಬಹುಪಾಲು ಮಂದಿ ಮನೆಬಿಟ್ಟು ಬರುವುದಿಲ್ಲ. ಹೀಗಾಗಿ ಹಿಂದಿನ ವರ್ಷಗಳಲ್ಲಿ ಮಧ್ಯರಾತ್ರಿಯಲ್ಲಿ ಜನರನ್ನು ಸ್ಥಳಾಂತರಿಸುವ ಅಪಾಯ ಎದುರಿಸಿದ್ದೇವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ, ಜಾನುವಾರು ಹಾನಿಯಿಲ್ಲದೇ ಎಲ್ಲರನ್ನೂ ರಕ್ಷಿಸಿದ್ದೇವೆ. ಈ ಬಾರಿಯೂ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಆರ್‌ಸಿಎಸ್ ನಾಗಭೂಷಣ ಕಲ್ಮನೆ ಮಾತನಾಡಿ, ನಾಡುಮಾಸ್ಕೇರಿ ಪಂಚಾಯಿತಿ ವ್ಯಾಪ್ತಿಯ ಮಂಜುಗುಣಿ ಸೇತುವೆ ನಿರ್ಮಾಣ ವೇಳೆ ಸುರಿದ ಮಣ್ಣಿನಿಂದಲೇ ಪ್ರವಾಹ ಎಂಬ ಅಭಿಪ್ರಾಯ ಸ್ಥಳೀಯರಲ್ಲಿದೆ. ಹೀಗಾಗಿ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ. ಉಳಿದಂತೆ ಸಮಸ್ಯೆ ಇಲ್ಲ. ಸಿದ್ಧತೆಗಳಿವೆ ಎಂದರು.
ಉಪವಿಭಾಗಾಧಿಕಾರಿ ರಾಹುಲ ಪಾಂಡೆ, ಇತ್ತೀಚಿನ ಮಳೆಯಿಂದ ಕುಮಟಾ ತಾಲೂಕಿನಲ್ಲಿ ೭ ಮನೆಗಳು ಭಾಗಶಃ ಹಾನಿಯಾಗಿದ್ದು ಪರಿಹಾರ ವಿತರಿಸಲಾಗಿದೆ. ಅಂಕೋಲಾ ತಾಲೂಕಿನಲ್ಲಿ ೬ ಮನೆಗಳು ಹಾನಿಯಾಗಿದ್ದು ೪ ಮನೆಗಳಿಗೆ ಮಾತ್ರ ವಿತರಿಸಲಾಗಿದೆ. ಇನ್ನೆರಡು ಮನೆಗಳು ೧೫%ಕ್ಕಿಂತ ಕಡಿಮೆ ಹಾನಿಯಾಗಿದೆ. ಒಂದು ದನ ಸತ್ತಿದ್ದಕ್ಕೆ ಪರಿಹಾರ ಕೊಡಲಾಗಿದೆ. ಉಪವಿಭಾಗದಲ್ಲಿ ಪ್ರವಾಹ ನಿರ್ವಹಣೆಗಾಗಿ ಒಟ್ಟೂ ೨೩ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ತಾಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ, ತಹಸೀಲ್ದಾರ್ ವಿವೇಕಶೇಣ್ವಿ, ತಾಪಂ ಇಒ ಸಿ.ಟಿ.ನಾಯ್ಕ, ಪ್ರೊಬೆಷನರಿ ಎಸಿಎಫ್ ಕಾವ್ಯಾ ಇದ್ದರು.