ಕುಮಟಾ: ತಾಲ್ಲೂಕಿನ ವನ್ನಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ (ಪಿ.ಸಂ. ೯೪೬) ಕೊರೋನಾ ಸೋಂಕು ಇರುವುದು ದೃಢವಾಗಿದೆ. ಇನ್ನೊಂದು ಪ್ರಕರಣದಲ್ಲಿ ಭಟ್ಕಳದ ಎರಡು ವರ್ಷದ ಮಗುವಿಗೂ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಕುಮಟಾದ ಕೋವಿಡ್-೧೯ ರೋಗಿಯು ರತ್ನಗಿರಿಯಿಂದ ಮೇ.೫ರಂದು ಮೀನಿನ ಲಾರಿಯಲ್ಲಿ ಪ್ರಯಾಣ ಮಾಡಿದ್ದಾರೆ. ಮೀನುಗಾರಿಕೆಗೆ ಅವಕಾಶ ಕಲ್ಪಸಿರುವುದರಿಂದ ಪ್ರಯಾಣ ಸಾಧ್ಯವಾಗಿದೆ. ಹಿರೇಗುತ್ತಿ ಚೆಕ್‌ಪೋಸ್ಟ್ ಬಳಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗಂಟಲ ದ್ರವ ಪರೀಕ್ಷೆ ನಡೆಸಿ ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಮಂಗಳವಾರ ಸಂಜೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದರು.
ಕುಮಟಾದ ಜನರು ಆತಂಕಿತರಾಗಬೇಕಿಲ್ಲ. ತಾಲ್ಲೂಕಾಡಳಿತದ ಮುನ್ನೆಚ್ಚರಿಕೆ ಕ್ರಮದಿಂದಾಗಿ ಪಿ.ಸಂ. ೯೪೬ರಿಂದ ಸಮುದಾಯಕ್ಕೆ ಹಬ್ಬುವುದು ತಪ್ಪಿದೆ. ಸೋಂಕಿನ ಲಕ್ಷಣಗಳು ಕಂಡಿವೆಯೇ ಹೊರತು ಆ ವ್ಯಕ್ತಿಯು ಆರೋಗ್ಯಯುತವಾಗಿದ್ದಾನೆ. ಭಟ್ಕಳದ ಸಕ್ರಿಯ ರೋಗಿಗಳಲ್ಲಿ ವೃದ್ಧರನ್ನು ಹೊರತುಪಡಿಸಿ ಉಳಿದವರು ಆರೋಗ್ಯವಾಗಿದ್ದಾರೆ. ಸದ್ಯದಲ್ಲೇ ಗುಣಮುಖರಾಗಿ ಬರಲಿದ್ದಾರೆ ಎಂದರು.
ಹೊರಭಾಗದಿಂದ ಬರುವವರು ನ್ಯಾಯ ಮಾರ್ಗದಲ್ಲಿ ಬರಬೇಕು. ಆಯಾ ತಾಲ್ಲೂಕಾಡಳಿತ ಅನುಮತಿ ಪಡೆದು ಬರಬೇಕು. ಜೊತೆಗೆ ನಿಯಮಗಳಿಗನುಸಾರವಾಗಿ ನಡೆದುಕೊಳ್ಳಬೇಕು. ಹೋಂ ಕ್ವಾರಂಟೈನ್ ನಲ್ಲಿಟ್ಟರೆ ಯಾರೂ ಸತ್ಯ ಹೇಳುವುದಿಲ್ಲ. ಹಾಗಾಗಿಯೇ ಹೊರರಾಜ್ಯದಿಂದ ಬಂದವರನ್ನು ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್ ಮಾಡಲಾಗುತ್ತದೆ. ಹಾಗೆ ಮಾಡುವುದರಿಂದ ಅವರು ಬೇರೆ ಜನರನ್ನು ಸಂಪರ್ಕಿಸದಂತೆ ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.