ಅಂಕೋಲಾ: ತಾಲ್ಲೂಕಿನ ರಾಮನಗುಳಿ ಡೊಂಗ್ರಿ ಗ್ರಾಮ ಪಂಚಾಯತಿ ಸಂಪರ್ಕ ಕಲ್ಪಿಸುವ 25 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರವಾರ, ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಡೋಂಗ್ರಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಶ್ರಮಿಸಿದ್ದೇನೆ. ಶಾಸಕಿಯಾಗಿ ಆಯ್ಕೆಯಾಗುವ ಮೊದಲು ಇಲ್ಲಿನ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ ಸಮಾಧಾನವಿದೆ.
ರಸ್ತೆಯನ್ನೇ ಕಾಣದ ಇಲ್ಲಿನ ಹಲವು ಕುಗ್ರಾಮಗಳಿಗೆ ಶಾಶ್ವತ ರಸ್ತೆ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಾಜಕಾರಣಕ್ಕಿಂತ ಅಭಿವೃದ್ಧಿ ಮುಖ್ಯ ವಿಷಯವಾಗಿದೆ.ಸೇತುವೆ ಇಲ್ಲದೇ ಇಲ್ಲಿ ಜನರು, ಶಾಲಾ ಮಕ್ಕಳು ನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಶಾಶ್ವತ ಸೇತುವೆ ಒಂದು ವರ್ಷದಲ್ಲಿ ನಿರ್ಮಾಣವಾಗಿ ಜನ ಬಳಕೆಗೆ ಲಭ್ಯವಾಗಲಿದೆ. ಸೇತುವೆಗೆ ಅನುದಾನ ಮಂಜೂರಾಗಲು ಹಿಂದಿನ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಇಂದಿನ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೇತುವೆಗೆ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಅಂದಿನ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ವಿಶೇಷ ಮುತುವರ್ಜಿವಹಿಸಿ ಅನುದಾನ ಮಂಜೂರು ಮಾಡಲು ಕಾರಣಕರ್ತರಾಗಿದ್ದಾರೆ.
ಅದರಂತೆ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೂ ಸಂಸದರಾದ ಅನಂತಕುಮಾರ ಹೆಗಡೆ ಅವರಿಗೂ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು, ಸುಂಕಸಾಳ ಹಾಗೂ ಡೋಂಗ್ರಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.