ಕುಮಟಾ: ವೆಂಕಟ್ರಮಣ ದೇವರ ಜಾತ್ರೆಯನ್ನು ಸರಳ ಹಾಗೂ ಕೋವಿಡ್ ನಿಯಮ ಪಾಲನೆಯೊಂದಿಗೆ ಆಚರಣೆಯ ಜೊತೆಯಲ್ಲಿ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಹಿತ ಕಾಯುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪುರಸಭಾ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ದಿನಾಂಕ 8 ರಂದು ಮಂಗಳವಾರ ನಡೆಯಲಿರುವ ಕುಮಟಾ ಜಾತ್ರೆಯನ್ನು, ಸರಳ ಧಾರ್ಮಿಕ ವಿಧಿ,ವಿಧಾನದೊಂದಿಗೆ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಪುರಸಭಾ ಮುಖ್ಯಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಜಾತ್ರೆಯಲ್ಲಿ ವ್ಯಾಪಾರ,ವಹಿವಾಟು ನಡೆಸುವ ವ್ಯಾಪಾರಿಗಳ ಹಾಗೂ ಸಾರ್ವಜನಿಕರ ಹಿತ ಕಾಯುವತ್ತ ಗಮನ ಹರಿಸಬೇಕು.
ಕಟ್ಟುನಿಟ್ಟಿನ ಕೊವೀಡ್ ನಿಯಮ ಪಾಲಿಸುವ ನೆಪದಲ್ಲಿ ಯಾರಿಗೂ ತೊಂದರೆಕೊಡಬಾರದು. ಪೊಲೀಸರು ಕಾನೂನು,ಸುವ್ಯವವಸ್ಥೆ ಕಾಯುವುದರೊಂದಿಗೆ ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಯಾರೋಬ್ಬರಿಗೂ ತೊಂದರೆ ನೀಡಬಾರದು. ವಿವಿಧ ವ್ಯಾಪಾರಸ್ಥರು ಕರೋನಾ ಕಾರಣದಿಂದಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುವವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಅದೇ ರೀತಿ ಕೊವೀಡ್ ಮುನ್ನೇಚ್ಚರಿಕೆ ವಹಿಸುವತ್ತ ಪುರಸಭಾ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಜಾತ್ರೆಗೆ ಬರುವವರ ಮೇಲೆ ತೀವೃ ನಿಘಾವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ನಂತರ ಜಾತ್ರಾ ಸ್ಥಳ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಮುಖ್ಯಾಧಿಕಾರಿ ಸುರೇಶ.ಎಮ್.ಕೆ, ಸಿ.ಪಿ.ಆಯ್ ತಿಮ್ಮಪ್ಪ ನಾಯ್ಕ ಹಾಗೂ ಅಧಿಕಾರಿಗಳು ಹಾಜರಿದ್ದರು.