ಹೊನ್ನಾವರ: ಪಟ್ಟಣದ ಶರಾವತಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನಿಂದ ಹುಬ್ಬಳ್ಳಿಯ ಕಡೆ ಅನಿಲ ತುಂಬಿದ ಟ್ಯಾಂಕರ್ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿ ಅನಿಲ ಸೋರಿಕೆ ಆದ ಘಟನೆ ಮಂಗಳವಾರ ನಡೆದಿದೆ.
ಟ್ಯಾಂಕರ್ ಎದುರುಗಡೆ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ. ಪರಿಣಾಮ ಸಮೀಪದಲ್ಲಿ ಇದ್ದ ವಿದ್ಯುತ್ ಕಂಬ ತುಂಡಾಗಿದೆ. ಟ್ಯಾಂಕರ್ ನಲ್ಲಿರುವ ಅನಿಲ ಸೋರಿಕೆಯಾಗುವ ಭೀತಿಯಿಂದ ಅಗ್ನಿಶಾಮಕ,ಹೆಸ್ಕಾಂ, ಪೊಲೀಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಸೋರಿಕೆ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸಿದರು. ಅಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಯಾವುದೇ ಅನಾಹುತ ನಡೆಯದಂತೆ ಬ್ಯಾರಿಗೇಟ್ ಅಳವಡಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ ಅಗ್ನಿಶಾಮಕ ಸಿಬ್ಬಂದಿಗಳು ನೀರು ಸಿಂಪಡಣೆ ನಡೆಸಿ ಸುರಕ್ಷಿತ ಕ್ರಮ ಕೈಗೊಂಡಿದ್ದಾರೆ.ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ ಆಗಿರುವುದರಿಂದ ಕ್ರೈನ್ ಮೂಲಕ ಪಕ್ಕಕ್ಕೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಘಟನೆಯಿಂದ ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕರು ಗಾಯಾಳುವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ಯಾಂಕರ್ ಪಲ್ಟಿಯಾದ ಹಿನ್ನಲೆ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯ ಹೋಟೆಲ್ ಮನೆಗಳಲ್ಲಿ ಗ್ಯಾಸ್ ಬಳಸದಂತೆ ಮಾಹಿತಿ ನೀಡಲಾಯಿತು. ಇದರಿಂದ ಹೊಟೇಲ್ ಗಳಲ್ಲಿಯು ಸಹ ಗ್ರಾಹಕರಿಗೆ ಮಧ್ಯಾಹ್ನದ ಊಟ, ತಿಂಡಿ ವಿತರಣೆಗೆ ಸಮಸ್ಯೆಯಾಯಿತು.ಸುಮಾರು5ಗಂಟೆಗೂ ಹೆಚ್ಚುಕಾಲ ರಾಷ್ಟ್ರೀಯ ಎರಡು ಕಡೆ ವಾಹನ ಸಾಲಾಗಿ ನಿಲ್ಲುವಂತಾಗಿ ದೂರದ ವಾಹನ ಚಾಲಕರು ಪ್ರಯಾಣಿಕರು ಪರದಾಡುವಂತಾಯಿತು.