ಹೊನ್ನಾವರ:ಪರೇಶ್ ಕುಟುಂಬದ ದುಗುಡದ ಜೊತೆ ಸರ್ಕಾರ,ನಮ್ಮ ಪಕ್ಷ ಇದೆ.ಅವರಿಗೆ ನ್ಯಾಯ ಕೊಡಿಸುವಲ್ಲಿ ನಾವೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ, ಪ್ರಕರಣ ಪುನಃ ತನಿಖೆಗೊಳಪಡಿಸಲು ಮುಖ್ಯಮಂತ್ರಿಯವರಲ್ಲಿ ವಿನಂತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಪಟ್ಟಣದ ವಿಶ್ರಾಂತಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈಗಾಗಲೇ ಗ್ರಹಮಂತ್ರಿಗಳೊಂದಿಗೆ ಈ ವಿಚಾರ ಕುರಿತಂತೆ ಮಾತನಾಡಿದ್ದೇನೆ.ಮುಖ್ಯಮಂತ್ರಿಯವರಿಗೆ ಭೇಟಿ ಮಾಡಿ ಪ್ರಕರಣ ಪುನರ್ ತನಿಖೆ ಮಾಡಲಿಕ್ಕೆ ಆದೇಶ ಕೊಡಬೇಕು ಎನ್ನುವ ಮನವಿ ಮಾಡುತ್ತೇನೆ. ಪುತ್ರ ಪರೇಶ್ ಸಾವು ಅಸಹಜ ಸಾವಾಗಿದೆ. ಅದಕ್ಕೆ ಸಾಕ್ಷಿ ಇಲ್ಲ ಅನ್ನೋದು ಬಿಟ್ಟರೆ ನಡೆದಂತ ಘಟನೆ ಸತ್ಯ.ಸಹಜ ಸಾವು ಅನ್ನೋದಕ್ಕೆ ಯಾವ ಆಧಾರಗಳಿಲ್ಲ ಎಂದು ತಂದೆ ಕಮಲಾಕರ್ ಮೇಸ್ತ ಹೇಳಿದ್ದಾರೆ.ಹಾಗಾಗಿ ಪುನರ್ ತನಿಖೆ ಚಿಂತನೆ ನಡೆದಿದೆ.
ಪುನಃ ಸಿಬಿಐಗೆ ತನಿಖೆಗೆ ಆದೇಶ ಕೊಡಬೇಕಾ ಅಥವಾ ಪರ್ಯಾಯವ ಅನ್ನೋದನ್ನು ಕೂಡ ಮುಖ್ಯಮಂತ್ರಿಗಳಿಗೆ ಆದೇಶ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಮತ್ತಷ್ಟು ಪಾರದರ್ಶಕವಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ತನಿಖೆ ಮಾಡುವಂತ ವ್ಯವಸ್ಥೆಗಳನ್ನು ಮಾಡುತ್ತೇವೆ ಎನ್ನುವಂತಹ ಮಾತನ್ನು ಕಮಲಾಕರ್ ಮೇಸ್ತ ಹಾಗೂ ಕುಟುಂಬದವರಿಗೆ ಭೇಟಿಯಾಗಿ ಹೇಳಿದ್ದೇನೆ ಎಂದರು.
ಬಿಜೆಪಿಗರು ಪರೇಶ್ ಸಾವಿನ ಫಲಾನುಭವಿಗಳು ಎಂಬ ಕಾಂಗ್ರೆಸ್ ಪಕ್ಷದವರ ಆರೋಪಕ್ಕೆ ಉತ್ತರಿಸಿ,ಘಟನೆ ಎಂದ ಮೇಲೆ ಆರೋಪ,ಪ್ರತ್ಯಾರೋಪಗಳು ಸಹಜ.ಅದು ರಾಜಕಾರಣದ ಒಂದು ಭಾಗ.ಇಂತಹ ಪ್ರಕರಣದಲ್ಲಿ ಯಾವುದೇ ಆರೋಪ,ಅಪಹಾಸ್ಯ ಮಾಡುವ ಮುನ್ನ ಒಮ್ಮೆ ಪರೇಶ್ ತಂದೆಯ ಸ್ಥಾನದಲ್ಲಿ ನಿಂತು ಅವರ ನೋವನ್ನ ಅರ್ಥ ಮಾಡಿಕೊಂಡು ಮಾತಾಡಬೇಕು. ಕಾಂಗ್ರೆಸ್ ಅವಧಿಯಲ್ಲಿ ಸಂಘ ಪರಿವಾರದವರು ಸೇರಿದಂತೆ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ,ಇದಕ್ಕೆ ಯಾರು ಫಲಾನುಭವಿಗಳು?ಆರೋಪಕ್ಕು ಮುನ್ನ ರಾಜಕಾರಣದಲ್ಲಿ ಸ್ಪಷ್ಟತೆ ಇರಲಿ ಎಂದು ಕೈ ಪಾಳಯಕ್ಕೆ ತಿರುಗೇಟು ನೀಡಿದರು.
ಗಲಭೆ ಸಂದರ್ಭದಲ್ಲಿ ಪಾಲ್ಗೊಂಡವರನ್ನು ರೌಡಿ ಶೀಟರ್ ಗೆ ಹಾಕಿದ್ದಾರೆ ಎನ್ನುವ ಆರೋಪ ಕಾಂಗ್ರೆಸ್ ನವರದ್ದಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಗುಂಪು ಘರ್ಷಣೆ ಸಂದರ್ಭದಲ್ಲಿ ಪೊಲೀಸರು ಶಾಂತಿ ಕಾಪಾಡಲು ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳುತ್ತಾರೆ. ಅದರಲ್ಲಿ ಪಕ್ಷಪಾತ ಆಗಿದೆ ಎನ್ನುವುದು ತಪ್ಪು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ,ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್,ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಸಹಪ್ರಭಾರಿ ಎನ್ ಎಸ್ ಹೆಗಡೆ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್, ಕಾರ್ಯದರ್ಶಿ ವಿನೋದ್ ನಾಯ್ಕ ರಾಯಲ್ ಕೇರಿ, ಮಂಡಲ ಅಧ್ಯಕ್ಷ ರಾಜು ಭಂಡಾರಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ,ಮುಖಂಡರಾದ ಎಮ್ ಎಸ್ ಹೆಗಡೆ ಕಣ್ಣಿ,ಎಮ್ ಜಿ ನಾಯ್ಕ ಮತ್ತಿತರಿದ್ದರು.