ಕುಮಟಾ: ಪರಂಪರಾಗತವಾಗಿ ಬಂದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸೋಣ ಎಂದು ಉಪವಿಭಾಗಾಧಿಕಾರಿ ರಾಘವೇಂದ್ರ
ಜಗ್ಲಾಸರ್ ಹೇಳಿದರು.
ತಾಲೂಕಿನ ಗುಡೇಅಂಗಡಿಯ ರಥಬೀದಿಯಲ್ಲಿ ಶ್ರೀ ಕಾಂಚಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಶ್ರೀ ಕಾಂಚಿಕಾ ಚಿಣ್ಣರ ಯಕ್ಷಗಾನ ಮಂಡಳಿಯಿಂದ ದಸರಾ ಉತ್ಸವದ ನಿಮಿತ್ತ ಬುಧವಾರ ಆಯೋಜಿಸಲಾದ “ಸಪ್ತ ಯಕ್ಷೋತ್ಸವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಮನರಂಜನಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ ಎಂದರು.
ಭೂ ವಿಜ್ಞಾನಿ ವಿನೋಧ ಭಟ್ಟ ಮಾತನಾಡಿ ಕನ್ನಡದ ಶ್ರೀಮಂತ ಕಲೆ ಯಕ್ಷಗಾನದಲ್ಲಿ ಮನೋಜ್ಞವಾಗಿ ಮೂಡಿಬರುವ ಚಂಡೆ ಹಾಗೂ ಮೃದಂಗದ ನಾದಸ್ವರ ಎಂತವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ. ಮತ್ತೆ ಮತ್ತೆ ಯಕ್ಷಗಾನದ ಇಂಪನ್ನು ಸವಿಯಬೇಕು ಎನ್ನುವ ತುಡಿತ ನೀಡುವ ಯಕ್ಷಗಾನ ನಿರಂತರ ಹರಿಯುವ ನದಿಯಾಗಲಿ. ತನ್ಮೂಲಕ ಕನ್ನಡ ಭಾಷೆಯ
ಉಳಿವಿಗೆ ಪ್ರತಿಯೊಬ್ಬರೂ ಕೈಜೊಡಿಸೋಣ ಎಂದರು.
ಯಕ್ಷಗಾನ ಸಂಸ್ಥೆಯ ಸಂಸ್ಥಾಪಕ ಜಗನ್ನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡದ ಶ್ರೀಮಂತ ಕಲೆಯನ್ನು ಉಳಿಸಿ, ಬೆಳೆಸಲು ನಿರಂತರ ಪ್ರಯತ್ನಿಸಲಾಗುವುದು. ನಮ್ಮ ನಂತರವೂ ಇಂತಹ ಯಕ್ಷಗಾನ ಕಲೆ ಜೀವಂತವಾಗಿರುವಂತೆ ಮಾಡುವ
ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಕನ್ನಡವನ್ನು ಪ್ರೀತಿಸುವ ಜೊತೆಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿಬೆಳೆಸೋಣ ಎಂದರು.
ಯಕ್ಷಗಾನ ಮಂಡಳಿಯ ಅಧ್ಯಕ್ಷ ಶ್ರೀ ವಿಷ್ಣು ನಾಯ್ಕ, ಬಾಡ ಗ್ರಾ.ಪಂ ಉಪಾಧ್ಯಕ್ಷೆ ಗೀತಾ ನಾಯ್ಕ,ಮಾರೂತಿ ನಾಯ್ಕ,ಯುವಕ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಮಾರೂತಿ ನಾಯ್ಕ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ನಾರಾಯಣ ಭಟ್ಟ, ಪ್ರವೀಣ ಭಟ್ಟ
ಇನ್ನಿತರರು ಇದ್ದರು.
ಶಿಕ್ಷಕ ರಾಜು ಶೇಟ್ ನಿರೂಪಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ‘ದ್ರೌಪದಿ ಪ್ರತಾಪ’
ಯಕ್ಷಗಾನ ಪ್ರದರ್ಶಿಸಲಾಯಿತು. ಭಾಗವತರಾಗಿ ಗಣಪತಿ ಮರಾಠಿ, ಮೃದಂಗ ರಮಣ ಹೆಗಡೆ, ಸುಕ್ರಪ್ಪ ನಾಯ್ಕ ಬಾಡ ಚಂಡೆ ನುಡಿಸುವ ಮೂಲಕ ಯಕ್ಷಗಾನ ಕಲಾಪ್ರೀಯರ ಮೆಚ್ಚುಗೆಗೆ ಪಾತ್ರವಾಯಿತು.