ಹೊನ್ನಾವರ: ‘ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಪ ತೆಂಗೇರಿ ಸೇರಿದಂತೆ ಪಕ್ಷದ ಪ್ರಾಮಾಣಿಕ, ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದ ವ್ಯಕ್ತಿಗಳಿಗೆ ಮಣೆ ಹಾಕುತ್ತಿರುವ ಧೋರಣೆಯನ್ನು ವಿರೋಧಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಂಬೋದರ ನಾಯ್ಕ ಹೇಳಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಇಪ್ಪತ್ತು ದಿನಗಳ ಹಿಂದೆ ನೂರಾರು ಕಿ.ಮೀ. ದೂರವಿರುವ ಬೆಂಗಳೂರಿನ ಕಾಂಗ್ರೆಸ್ ಭವನಕ್ಕೆ ತೆರಳಿ ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ ಅವರ ಮೂಲಕ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸರಿಪಡಿಸುವ ಕುರಿತಂತೆ ಮನವಿ ಪತ್ರ ಸಲ್ಲಿಸಿದ್ದರು. ಆದರು ಕೂಡಾ ಕಾಂಗ್ರೆಸ್ ಪಕ್ಷದ ಮುಖಂಡರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಪ್ರತಿಯೊಂದರಲ್ಲೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ಗೆ ಅನ್ಯಾಯವಾಗುತ್ತಿದ್ದು,ಇತ್ತೀಚೆಗೆ ಹೊನ್ನಾವರ ತಾಲೂಕು ಭೂ ನ್ಯಾಯ ಮಂಡಳಿಗೆ ನಾಲ್ಕು ಸರಕಾರಿ ನಾಮನಿರ್ದೆಶನ ಸದಸ್ಯರನ್ನು ನೇಮಿಸಿದ್ದು,ಅದರಲ್ಲಿ ಒಬ್ಬನೇ ಒಬ್ಬ ಸದಸ್ಯ ಹೊನ್ನಾವರ ಬ್ಲಾಕ್ ಕಾಂಗ್ರೆಸಗೆ ಸಂಭಂಧಿಸಿದವರಿಲ್ಲ. ಅದೇ ರೀತಿ ನಲವತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ತನು-ಮನ-ಧನ ಎಲ್ಲವನ್ನೂ ಸಮರ್ಪಿಸಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನನ್ನ ಅರ್ಜಿಯನ್ನು ಬದಿಗೊತ್ತಿ, ಪಕ್ಷದ ಪ್ರಾಥಮಿಕ ಸದಸ್ಯರಲ್ಲದ, ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ ಬಾಗಿಯಾಗದ ಹೊನ್ನಾವರ ಬ್ಲಾಕ್ ವ್ಯಾಪ್ತಿಯ ವಂದೂರು ಗ್ರಾಮದ ವಿ.ಕೆ.ವಿಶಾಲ್ ಭಟ್ಟ ಅವರನ್ನು ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ, ಕೆ.ಡಿ.ಪಿ.ಯ ಸರಕಾರಿ ನಾಮನಿರ್ದೆಶನ ಸದಸ್ಯರನ್ನಾಗಿ ನೇಮಿಸಿರುವುದರ ಔಚಿತ್ಯವಾದರೂ ಏನು ? ಎಂದು ಪ್ರಶ್ನಿಸಿ, ಪಕ್ಷದ ಪ್ರಾಥಮಿಕ ಸದಸ್ಯ ಹೊಂದಿರದ ಬಗ್ಗೆ ದಾಖಲೆ ಪ್ರದರ್ಶಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ಮೇಸ್ತ ಮಾತನಾಡಿ ಜಗದೀಪ ತೆಂಗೇರಿಯವರೊಂದಿಗೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಬೇಕು. ಇಲ್ಲದಿದ್ದರೇ ಅವರಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ. ಕಳೆದ ೪೦ ವರ್ಷ ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಜಗದೀಪ್ ತೆಂಗೇರಿಯವರಿಗೆ ಸೂಕ್ತ ಸ್ಥಾನಮಾನ ಪಕ್ಷ ನೀಡಬೇಕು. ತೆಂಗೇರಿಯವರನ್ನು ಬಿಟ್ಟು ನಾವು ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಿರುವ ಕುರಿತಂತೆ ನಿರ್ಣಯ ಕೈಗೊಂಡಿದ್ದೇವೆ ಎಂದು ವಿವರಿಸಿದರು.ಇನ್ನೂ ಹದಿನೈದು ದಿನ ತಾಳ್ಮೆಯಿಂದ ಕಾಯುತ್ತೇವೆ. ಪಕ್ಷಕ್ಕೆ ನಮ್ಮ ಅಗತ್ಯವಿಲ್ಲ ಎಂದರೆ ನಮ್ಮ ದಾರಿ ನಾವು ಹಿಡಿಯುತ್ತೇವೆ ಎಂದರು.
ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತುಳಸಿ ಗೌಡ, ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ಸುಧಾ ನಾಯ್ಕ, ಜ್ಯೋತಿ ಮಹಾಲೆ, ಮಾದೇವ ನಾಯ್ಕ ಕರ್ಕಿ,ಕೃಷ್ಣ ಹರಿಜನ ಇನ್ನೂ ಮುಂತಾದವರು ಮಾತನಾಡಿ ಪಕ್ಷದ ನಾಯಕರ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದರು.