ಕುಮಟಾ: ಕೇಂದ್ರ ಸರ್ಕಾರ ಜಾರಿ ಮಾಡಿದ ಎಚ್.ಯು.ಐ.ಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕುಮಟಾದ ದೈವಜ್ಞ ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘದಿಂದ ತಹಸೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕುಮಟಾದ ದೈವಜ್ಞ ಚಿನ್ನ-ಬೆಳ್ಳಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕುಮಟಾ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಚಿನ್ನ-ಬೆಳ್ಳಿ ವ್ಯಾಪಾರಸ್ಥರು ಜಿಲ್ಲಾ ದೈವಜ್ಞ ಜ್ಯುವೆಲ್ಲರಿ ಮರ್ಚಂಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ ರಾಯ್ಕರ್ ಅಂಕೋಲಾ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಾರಂಪರಿಕವಾಗಿ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಸಿದ್ಧಪಡಿಸಿಕೊಂಡು ವ್ಯಾಪಾರ-ವಹಿವಾಟು ಮಾಡಿಕೊಂಡು ಬಂದಿದ್ದೇವೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾದ ನಮಗೆ ಕೇಂದ್ರ ಸರ್ಕಾರ ಜಾರಿ ಮಾಡಿದ ಎಚ್‌ಯುಐಡಿ ಕಾಯ್ದೆಯಿಂದ ಅನ್ಯಾಯ ವೆಸಗಿದಂತಾಗಿದೆ.
ಎಚ್‌ಯುಐಡಿ ಕಾಯ್ದೆಯಿಂದಾಗಿ ಆಭರಣಗಳ ಸುರಕ್ಷತೆ ಹಾಗೂ ಚಿನ್ನದ ಡೇಟಾ ಗೌಪ್ಯತೆ ಇರುವುದಿಲ್ಲ. ಗ್ರಾಹಕರು ಚಿನ್ನದ ಆಭರಣಗಳನ್ನು ಬದಲಾಯಿಸಲು ಬರುವುದಿಲ್ಲ. ಆಭರಣಗಳನ್ನು ಮಾರಾಟ ಮಾಡಿದ ಅಂಗಡಿಗಳ ಮಾಹಿತಿ ತಿಳಿಯಲು ಸಾಧ್ಯವಿಲ್ಲ. ಈ ಕಾಯ್ದೆ ಜಾರಿಯಾದಲ್ಲಿ ಚಿನ್ನದ ಉದ್ಯಮಿಗಳು ಮತ್ತು ಕೆಲಸಗಾರರು ಬಿಐಎಸ್ ಅಡಿಯಾಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಸ್ವಾಭಿಮಾನದಿಂದ ಚಿನ್ನದ ಕೆಲಸ ನಿರ್ವಹಿಸಿಕೊಂಡು ಬಂದಿರುವ ನಮ್ಮನ್ನು ಅತಂತ್ರರನ್ನಾಗಿಸುತ್ತಿರುವ ಕೇಂದ್ರ ಸರ್ಕಾರ ಎಚ್‌ಯುಐಡಿ ಕಾಯ್ದೆಯನ್ನು ವಿರೋಧಿಸುತ್ತೇವೆ. ಹಾಗಾಗಿ ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಮಾರಕವಾಗಿ ಈ ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ದೈವಜ್ಞ ಜ್ಯುವೆಲ್ಲರಿ ಮರ್ಚಂಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ ರಾಯ್ಕರ್ ಅಂಕೋಲಾ ಮಾತನಾಡಿ, ಈ ಕಾಯ್ದೆಯಿಂದ ಚಿನ್ನಾಭರಣ ಕೆಲಸಗಾರರು ತೀರಾ ಸಂಕಷ್ಟಕ್ಕೆ ಸಿಲುಕಲಿದ್ದು, ಜೀವನ ನಡೆಸಲು ಪರದಾಡುವಂತಹ ದುಃಸ್ಥಿತಿ ಎದುರಾಗುತ್ತದೆ. ಕೆಲಸಗಾರರ ಹಿತದೃಷ್ಟಿಯಿಂದ ಎಚ್‌ಯುಐಡಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿದ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ, ಮನವಿಯನ್ನು ಮೇಲಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುವರ್ಣಕಾರರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಧುಸೂಧನ ಶೇಟ್, ವ್ಯಾಪಾರಸ್ಥರಾದ ರಾಜೇಶ ಶೇಟ್, ರವಿ ಶೇಟ್, ಶ್ರೀಧರ ಶೇಟ್, ಶ್ರೀಪಾದ ಶೇಟ್, ರತ್ನಾಕರ ಶೇಟ್, ಶ್ರೀಧರ ಶೇಟ್, ಮಾರುತಿ ಶೇಟ್, ಅಜಿತ್ ಶೇಟ್, ಚಂದ್ರಕಾಂತ ಶೇಟ್, ಉಲ್ಲಾಸ ಶೇಟ್, ಧನಂಜಯ ಶೇಟ್, ಬಾಲಕೃಷ್ಣ ಶೇಟ್, ರಾಘವೇಂದ್ರ ಶೇಟ್, ಭರತರಾಜ ನಾಯ್ಕ, ಗಣೇಶ ಶೇಟ್, ರಾಜೇಶ ಶೇಟ್, ರಾಮದಾಸ ಶೇಟ್, ವಿನಾಯಕ ಶೇಟ್, ಪ್ರವೀಣ ಶೇಟ್, ಗೌತಮ್ ಶೇಟ್, ನಾಗೇಂದ್ರ ಭಟ್, ರವಿ ಶೇಟ್, ಸತೀಶ ಶೇಟ್, ಚಿನ್ನಬೆಳ್ಳಿ ಕೆಲಸಗಾರರು ಸೇರಿದಂತೆ ಮತ್ತಿತರರು ಇದ್ದರು.