``
ಕುಮಟಾ : ಕಳೆದ ಹಲವಾರು ವರ್ಷಗಳಿಂದ ಕುಮಟಾದ ನಾಮಧಾರಿ ಯುವಕರೆಲ್ಲ ಸೇರಿ ನಡೆಸಿಕೊಂಡು ಬರುತ್ತಿರುವ ``ನಾಮಧಾರಿ ಟ್ರೋಫಿ''ಗೆ ಮಹಾತ್ಮಾ ಗಾಂಧಿ (ಮಣಕಿ ಮೈದಾನ) ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
``ನಾಮಧಾರಿ ಟ್ರೋಫಿ-2024'' ಕಾರ್ಯಕ್ರಮದ ಉದ್ಘಾಟಕರಾದ ಉದ್ಯಮಿ ಹಾಗೂ ಕುಮಟಾ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಕೋನಳ್ಳಿಯ ಎಚ್. ಆರ್. ನಾಯ್ಕ ಮಾತನಾಡುತ್ತ, ``ಇಲ್ಲಿ ಸಂಘಟನೆ ಮತ್ತು ನಿರ್ವಹಣೆ ಮಾತ್ರ ನಾಮಧಾರಿ ಸಮಾಜದ್ದು. ಎಲ್ಲಾ ಸಮಾಜದ ಕ್ರೀಡಾಪಟುಗಳು ಇಲ್ಲಿ ಭಾಗಿಯಾಗಬಹುದು. ಇಂತಹ ಆಟದಿಂದ ಎಲ್ಲ ಸಮಾಜದ ನಡುವೆ ಇನ್ನೂ ಹೆಚ್ಚಿನ ನಂಬಿಕೆ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಯಲು ಸಾಧ್ಯ. ನಮ್ಮಲ್ಲಿ ಜನಸಂಖ್ಯೆ ಇದೆ, ಉದ್ದಿಮೆದಾರರಿದ್ದಾರೆ, ರಾಜಕಾರಣಿಗಳಿದ್ದಾರೆ, ನಮ್ಮಲ್ಲಿ ಬಹುತೇಕ ಎಲ್ಲವೂ ಇದೆ. ಆದರೆ ಶೈಕ್ಷಣಿಕ ಸಂಸ್ಥೆಯಿಲ್ಲ ಎಂಬ ಕೊರಗಿದೆ. ಮುಂದೆ ನಾವೆಲ್ಲರೂ ಸೇರಿ ಆ ನಿಟ್ಟಿನಲ್ಲಿ ಹೆಜ್ಜೆಯಿಡುತ್ತೇವೆ'' ಎಂದರು.
ಇದೇ ಸಂದರ್ಭ ಕ್ರೀಡಾಕೂಟಕ್ಕೆ ಅನುಕೂಲವಾಗಲೆಂದು ಎಚ್. ಆರ್. ನಾಯ್ಕರು ಸಂಘಟಕರಿಗೆ 25,000 ರೂಪಾಯಿ ನೀಡಿ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕ್ರೀಡಾಕೂಟದ ಧ್ವಜಾರೋಹಣಗೈದ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡುತ್ತ, ``ನಾನು ಬಹಳ ಅಭಿಮಾನದಿಂದ ನಾಮಧಾರಿ ಕ್ರೀಡಾ ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದೇನೆ. ಈ ಮೂಲಕ ನಾಮಧಾರಿ ಸಮಾಜ ಮತ್ತಷ್ಟು ಎತ್ತರಕ್ಕೆ ಏರಲಿ. ಕಳೆದ ಹಲವಾರು ವರ್ಷದಿಂದ ನಾಮಧಾರಿ ಟ್ರೋಫಿ ನಡೆಯುತ್ತಿದೆ. ಇಂತಹ ಕ್ರೀಡೆಯಿಂದ ಎಲ್ಲಾ ಸಮಾಜದ ಪ್ರತಿಭೆಗಳು ಬೆಳಗಲು ಸಾಧ್ಯ. ಈ ಕ್ರೀಡಾಕೂಟ ಯಶಸ್ವಿಯಾಗಲಿ, ಕೊನೆಗೆ ಕ್ರಿಕೆಟ್ ಗೆಲ್ಲಲಿ'' ಎಂದರು.
ಟ್ರೋಫಿ ಅನಾವರಣ ಮಾಡಿದ ಪುರಸಭಾ ಸದಸ್ಯೆ ಸುಶೀಲಾ ನಾಯ್ಕ ಮಾತನಾಡಿ, ``ನಮ್ಮ ಕುಮಟಾ ಯುವಕರ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಇಂತಹ ಕ್ರೀಡಾಕೂಟ ಅತ್ಯವಶ್ಯವಾಗಿ ಬೇಕು. ಈ ಕ್ರೀಡಾಕೂಟದಿಂದ ನಮ್ಮ ಅನೇಕ ಪ್ರತಿಭೆಗಳು ಹೊರ ಬಂದು ಅವರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅವಕಾಶ ದೊರಕುವಂತಾಗಲಿ'' ಎಂದರು.
ಮುಖ್ಯ ಅತಿಥಿಯಾಗಿದ್ದ ಕುಮಟಾ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ್ ಗಣೇಶ್ ಮಾತನಾಡುತ್ತ, ``ಸಮಾಜ ಬಾಂಧವರೊಡನೆ ಕೂಡಿ ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಆತ್ಮತೃಪ್ತಿ ಸಿಗುತ್ತದೆ. ಇಂತಹ ಕ್ರೀಡಾ ಚಟುವಟಿಕೆ ಇನ್ನಷ್ಟು ಹೆಚ್ಚಾಗಲಿ. ಎಲ್ಲಾ ಕೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ಆಟವಾಡುವಂತಾಗಲಿ. ನಮ್ಮಲ್ಲಿ ಒಂದಾಗಿ ಹೋಗುವ ಮನೋಭಾವ ಕಡಿಮೆಯಿದ್ದು, ಇಂತಹ ಒಗ್ಗೂಡುವಿಕೆಯ ಕಾರ್ಯಕ್ಕೆ ನನ್ನ ಸಹಾಯ, ಸಹಕಾರ ಯಾವತ್ತೂ ಇದೆ'' ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ``ಮಾತೃ ಸಂಘವಾದ ಆರ್ಯ ಈಡಿಗ ನಾಮಧಾರಿ ಸಂಘವು ನಮ್ಮ ಯುವಕರ ಬೆನ್ನಿಗೆ ಯಾವತ್ತೂ ಇರುತ್ತದೆ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲೂ ನಾವು ತುಂಬು ಹೃದಯದಿಂದ ಪಾಲ್ಗೊಳ್ಳುತ್ತೇವೆ. ನಾಮಧಾರಿ ಯುವ ಸಂಘಟನೆ ಮತ್ತಷ್ಟು ಬೆಳೆಯಲಿ, ನಮ್ಮ ಸಮಾಜದ ಯುವಕರು ಅತೀ ಕಡಿಮೆ ಸಮಯದಲ್ಲಿ ಸಂಘಟಿಸಿದ ಈ ಕ್ರೀಡಾಕೂಟದಲ್ಲಿ ಎಲ್ಲಾ ಸಮಾಜದವರು ಪಾಲ್ಗೊಳ್ಳುವಂತೆ ಆಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ'' ಎಂದು ಹರ್ಷ ವ್ಯಕ್ತಪಡಿಸಿದರು.
``ಇಲ್ಲಿ ಎಲ್ಲಾ ಕ್ರೀಡಾಪಟುಗಳು ಸೌಹಾರ್ದಯುತವಾಗಿ, ಕ್ರೀಡಾಸ್ಫೂರ್ತಿಯಿಂದ ಆಡುವುದರ ಜೊತೆಗೆ ಕ್ರೀಡೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ ಎಂಬುದನ್ನು ಅರಿತಿರಬೇಕು'' ಎಂದರು.
``ನಾಮಧಾರಿ ಯುವಕರು ಈ ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು'' ಎಂದು ಇದೇ ಸಂದರ್ಭ ಸಮಾಜದ ಅಧ್ಯಕ್ಷ ಮಂಜುನಾಥ ನಾಯ್ಕ ಯುವಕರಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮೂರೂರು ಗ್ರಾ. ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾಗಿರುವ ರಾಘವೇಂದ್ರ ನಾಯ್ಕ, ನಾಮಧಾರಿ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಎನ್. ಆರ್. ನಾಯ್ಕ, ನಾಮಧಾರಿ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ನಾಯ್ಕ, ಡಾ. ಎ. ವಿ. ಬಾಳಿಗಾ ಕಾಲೇಜಿನ ಉಪನ್ಯಾಸಕ ಪ್ರಮೋದ ನಾಯ್ಕ ಹಾಗೂ ಗೇರುಸೊಪ್ಪಾ ಹೆಸ್ಕಾಂ ಕಚೇರಿಯ ಸೆಕ್ಷನ್ ಆಫೀಸರ್ ವಿನಾಯಕ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.