ಕುಮಟಾ: ಕಳೆದ ಹಲವಾರು ವರ್ಷಗಳಿಂದ ನಿಸ್ಕ್ರಿಯವಾಗಿ ನಿಗೂಡವಾಗಿ ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿ ಇದ್ದ ಅನಂತಕುಮಾರ ಹೆಗಡೆಯವರು ಇತ್ತೀಚೆಗೆ ಎದ್ದುಬಂದು ಜಿಲ್ಲೆಯ ಅಲ್ಲಲ್ಲಿ ತಮ್ಮ ಪಕ್ಷದ ಸಭೆಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಗಮನಿಸಿದರೆ ತಾನೊಬ್ಬ ಸಂವಿದಾನದ ಅಡಿಯಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾದ ಸಂಸದ ಎನ್ನುವುದನ್ನು ಮರೆತಂತಿದೆ.ತಾನು ಬಾಯಿಗೆ ಬಂದಂತೆ ಏನೇ ಮಾತನಾಡಿದರೂ ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ಜನತೆ ಸಹಿಸಿಕೊಂಡು ಸುಮ್ಮನಿರುತ್ತಾರೆ ಎನ್ನುವ ಮನೋಸ್ಥಿತಿಗೆ ತಲುಪಿದ್ದಾರೆ ಅನಂತಕುಮಾರ ಹೆಗಡೆಯವರು.
5 ನೇ ಬಾರಿ ಸಂಸದ ಸದಸ್ಯರಾಗಿ ಆಯ್ಕೆಯಾಗಿ 5 ವರ್ಷ ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಮತದಾರರ ಮುಂದೆ ಸಾರ್ವಜನಿಕವಾಗಿ ತನ್ನ ಸಾಧನೆಯ ಪ್ರಗತಿ-ಪತ್ರಿಕೆ ಇಟ್ಟು ಮಾತನ್ನಾಡಬೇಕಿದ್ದ ಹೆಗಡೆಯವರು,ಅಲ್ಲಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಅಡ್ಡ ದಾರಿ ಹಿಡಿದು ಮಾತನಾಡುವುದನ್ನು ನಾವು ಕಾಣುತ್ತಿದ್ದೇವೆ. ಇದು ಮಾಡಿದ್ದುಣ್ಣೋ ಮಹಾರಾಯ ಎನ್ನುವ ಗಾದೆಯಂತಾಗಿದೆ ನಮ್ಮ ಜಿಲ್ಲೆಯ ಜನತೆಯ ಪಾಡು.ಎಂಥ ವಿಪರ್ಯಾಸ ನೋಡಿ.
ಹೆಗಡೆಯವರ ಬಾಯಲ್ಲಿ ಕೇವಲ ಹಿಂದು, ಮುಸ್ಲಿಂ, ಹಿಂದುತ್ವ,ದೇವಸ್ಥಾನ,ಮಸೀದಿ,ಈ ಪದಗಳನ್ನು ಹೊರತುಪಡಿಸಿ ಅಭಿವೃದ್ಧಿ,ಜಾತ್ಯಾತೀತತೆ,ಸಮಾನತೆ,ಆರ್ಥಿಕ ಸಮಾನತೆ,ಅಭಿವೃದ್ಧಿಗೆ ಸಂಪನ್ಮೂಲ ಕ್ರೂಡೀಕರಣ, ನಿರುದ್ಯೋಗ ನಿವಾರಣೆ ಉದ್ಯೋಗ,ಏಕತೆ,ಶಿಕ್ಷಣ ಎನ್ನುವಂತಹ ಪದಗಳು ಅಥವಾ ಮಾತುಗಳು ಎಂದೂ ಹೆಗಡೆಯವರ ಬಾಯಿಂದ ಬಂದದ್ದಿಲ್ಲ.
ಇವರ ಮಾತು ಉತ್ತರ ಕುಮಾರನ ಪೌರುಷದಂತೆ ಕೇವಲ ಪಕ್ಷದ ಕಾರ್ಯಕರ್ತರ ಮುಂದೆ ಮಾತ್ರ ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ.ಸಾರ್ವಜನಿಕ ಸಭೆಗಳನ್ನು ಕರೆದು ಇಂತಹ ಮಾತನ್ನಾಡುವ ಧೈರ್ಯ ಇವರಿಗೆ ಇದ್ದಂತಿಲ್ಲ.
ಹಿಂದೆಲ್ಲಾ ಕರಾವಳಿ ಭಾಗದ ಕೆಲವು ಹಿಂದುತ್ವದ ಅಮಲನ್ನೇರಿಸಿಕೊಂಡ ಹಿಂದುಳಿದ ವರ್ಗದ ನಾಮಧಾರಿ,ಬಿಲ್ಲವ,ಒಕ್ಕಲಿಗ, ಮೀನುಗಾರ ಜನಾಂಗದ ಹಾಗೂ ದಲಿತ ವರ್ಗದ ಯುವಜನತೆ ಇವರ ಹಿಂದುತ್ವದ ಕೋಮುದ್ವೇಷ ಹುಟ್ಟಿಸುವ ಬೆಂಕಿಚೆಂಡಿನ ಮಾತಿಗೆ ಮರುಳಾಗಿ ಜಿಲ್ಲೆಯಲ್ಲಿ ಹಿಂದು ಮುಸ್ಲಿಮ್ ಮಧ್ಯೆ ಬೆಂಕಿಹಚ್ಚಿ ಜಿಲ್ಲೆಯನ್ನು ಅಲ್ಲೋಲ ಕಲ್ಲೋಲಮಯವಾಗಿ ಮಾಡುತ್ತಿದ್ದರು.
ಇದರ ಪರಿಣಾಮವಾಗಿ ಹಿಂದುಳಿದ ವರ್ಗದ ಈ ಎಲ್ಲಾ ಯುವಜನತೆ ಕೋರ್ಟ್ ಕಛೇರಿ ಅಲೆಯುವ ಹೊಸ ಉದ್ಯೋಗ ಸೃಷ್ಠಿಸಿ ಕೊಂಡು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡರು. ಇಂತಹವರಿಗೆಲ್ಲ ನ್ಯಾಯ ಒದಗಿಸಿ ಕೊಡಬೇಕಾದ ಹೆಗಡೆಯವರು ಮೌನಕ್ಕೆ ಶರಣಾಗಿ ಅಡಗಿ ತಮ್ಮ ಮನೆಯಲ್ಲಿ ಕುಳಿತು ಕೊಂಡುಬಿಟ್ಟರು ಎಂದು ಅನೇಕ ನೊಂದ ಬಿಜೆಪಿ ಕಾರ್ಯಕರ್ತರು ಹೇಳತೊಡಗಿದರು.
ಇದರ ಪರಿಣಾಮ ಇಂದು ಹೆಗಡೆಯವರ ಬೆಂಕಿ ಚೆಂಡಿನ ಮಾತಿಗೆ ಬೆಂಕಿ ಹಚ್ಚುವ ಕಾರ್ಯಕರ್ತರ ಪಡೆಯೇ ಇಲ್ಲದಂತಾಗಿದೆ. ಅನಂತ್ ಕುಮಾರ್ ಹೆಗಡೆಯವರ ಈ ಬೆಂಕಿಚೆಂಡಿನ ಮಾತು ಈಗ ಟುಸ್ಸ್ ಪಟಾಕಿಯಂತಾಗಿದೆ ಎಂಬುದು ಅನೇಕರ ಅಂಬೋಣ.
ಯಾವೊಬ್ಬ ಬಿಜೆಪಿ ಪದಾಧಿಕಾರಿಗಳು ಅಥವಾ ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಅಥವಾ ಯಾವೊಬ್ಬ ಹಿಂದುತ್ವದ ಅಮಲೇರಿಸಿಕೊಂಡ ಹಿಂದುಳಿದ ವರ್ಗದ ಯುವಕರೂ ಸಹ ಇಂದು ಅನಂತ ಕುಮಾರ್ ಹೆಗಡೆ ಯವರ ಕೋಮು ದ್ವೇಷದ ಭಾಷಣವನ್ನು ಸಮರ್ಥಿಸಿಕೊಳ್ಳುವವರಿಲ್ಲ.
ಕಳೆದ 5 ಬಾರಿ ಅನಂತ್ ಕುಮಾರ್ ಹೆಗಡೆಯವರು ಸಲೀಸಾಗಿ ಆಯ್ಕೆ ಆಗುತ್ತಿದ್ದ ಕಾರಣವೇನೆಂದರೆ ವಿರೋಧ ಪಕ್ಷದವರು ಅನಂತಕುಮಾರ್ ವಿರುದ್ಧ ಬಹುಸಂಖ್ಯಾತ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಎನ್ನುವುದು ನನ್ನ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಅಂಬೋಣವಾಗಿದೆ.