ಕುಮಟಾ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕುಮಟಾ ಸೇರಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತ್ರಿವರ್ಣ ಧ್ವಜಕ್ಕೆ ಅಪಮಾನ ಮಡಿದ್ದು, ಇಂತಹ ಕೃತ್ಯಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಶಿರಸಿ , ಯಲ್ಲಾಪುರ ಹಾಗೂ ಕುಮಟಾ ಮಿರ್ಜಾನನಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ. ಮಿರ್ಜಾನನಲ್ಲಿ ತ್ರಿವರ್ಣ ದ್ವಜಕ್ಕೆ ಅಪಮಾನ ಮಾಡಿದ್ದು, ಈ ಬಗ್ಗೆ ನಾವು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಅಲ್ಲಿಗೆ ಹೋಗಿ ಕೇಳಲಿದ್ದೇವೆ. ನನಗೆ ಅಧಿಕಾರ ಮುಖ್ಯವಲ್ಲ. ಶಾಂತಿ ಕದಡುವ ಕೆಲಸ ಮಾಡಿದರೆ ನಾನು ಎಂದಿಗೂ ಸಹಿಸುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ಓಟಿನ ಇಂತಹ ಕೃತ್ಯಕ್ಕೆ ಆಸ್ಪದ ಕೊಡಬಾರದು ಇದೇ ರೀತಿ ಮುಂದುವರೆದರೆ ನಾವೆಲ್ಲರೂ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ ಎಂದ ಅವರು ನನ್ನ ಕ್ಷೇತ್ರದಲ್ಲಿಯೇ ಈ ರೀತಿಯ ಘಟನೆಗಳು ನಡೆಯುತ್ತಿದೆ ಎಂದಾದರೆ ಪೋಲಿಸ್ ಇಲಾಖೆ ಏನು ಮಾಡುತ್ತಿದೆ. ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ? ಆರೋಪಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ಎಂದು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ, ಪ್ರಮುಖರಾದ ಎನ್.ಎಸ್ ಹೆಗಡೆ, ಪ್ರಶಾಂತ ನಾಯ್ಕ, ಮೋಹಿನಿ ಗೌಡ, ವಿಶ್ವನಾಥ ನಾಯ್ಕ, ಬಿ.ಡಿ.ಪಟಗಾರ, ತಿಮ್ಮಪ್ಪ ಮುಕ್ರಿ, ಗಣೇಶ ಪಂಡಿತ, ಜಯಾ ಶೇಟ್ ಸೇರಿದಂತೆ ಇತರಿದ್ದರು.