ಕುಮಟಾ : ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆ ಕಂಪನಿಯ ಲಾರಿಗಳಿಂದ ಬ್ಯಾಟರಿ ಕದ್ದಿದ್ದ ಇಬ್ಬರು ಆರೋಪಿಗಳನ್ನು ಕದ್ದ ಮಾಲಿನ ಸಮೇತ ಕುಮಟಾ ಪೊಲೀಸರು ಹಿಡಿದಿದ್ದಾರೆ. ಕತಗಾಲದ ಕಪ್ಪೆಗುಳಿಯ ನಿವಾಸಿಗಳಾದ ಪ್ರಸಾದ ನಾಗರಾಜ ಮುಕ್ರಿ(೨೪), ಮಣಿಕಂಠ ತಿಮ್ಮಪ್ಪ ಮುಕ್ರಿ(೨೪) ಬಂಧಿತ ಆರೋಪಿಗಳು.
ಕುಮಟಾ-ಶಿರಸಿ ರಸ್ತೆ ಕಾಮಗಾರಿ ನಡೆಸುತ್ತಿರುವ ಆರ್‌ಎನ್‌ಎಸ್ ಇನ್ಫಾಸ್ಟ್ರಕ್ಚರ್ ಕಂಪನಿಯ ಎರಡು ಲಾರಿಗಳು ೨೪-೭-೨೩ ರಂದು ರಾತ್ರಿ ಕಪ್ಪೆಗುಳಿಯ ಕ್ಯಾಂಪ್ ಸೈಟಿನಲ್ಲಿ ನಿಂತಿದ್ದಾಗ ಒಟ್ಟೂ ೬೦ ಸಾವಿರರೂ. ಮೌಲ್ಯದ ಎಕ್ಸೈಡ್ ಕಂಪನಿಯ ೪ ಬ್ಯಾಟರಿಗಳನ್ನು ಕಳುವು ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕುಮಟಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆರೋಪಿಗಳು ಕದ್ದ ೪ ಬ್ಯಾಟರಿ ಸಹಿತ ಕಳುವಿಗೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ನವೀನ ನಾಯ್ಕ, ಪಿಎಸ್‌ಐ ಪದ್ಮಾದೇವಳಿ ನೇತೃತ್ವದಲ್ಲಿ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ತನಿಖಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.