ಕುಮಟಾ : ಕುಮಟಾದಲ್ಲಿ ಮತ್ತೆ ಗಾಂಜಾ ಕಂಪು ಹಬ್ಬಿದೆ. ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕುಮಟಾ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿತರನ್ನು ಬಂಧಿಸಿ ರೂ. 5000 ಮೌಲ್ಯದ 132 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಹಳಕಾರ ಗಣೇಶನಗರದ ಸಮೀಪ ಶುಕ್ರವಾರ ನಡೆದಿದೆ.
ಪವನ ಸುಧೀರ ಕುಮಟಾಕರ ಸಿದ್ದನಭಾವಿ, ದಿವಾಕರ (ದೃವ) ವಿಷ್ಣು ಉಪ್ಪಾರ ಸಿದ್ದನಭಾವಿ ಬಂಧಿತ ಆರೋಪಿಗಳು. ಇವರು ಬೈಕ್ ಬೈಕ್ ಮೇಲೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರು ಹೆಡೆಮುರಿ ಕಟ್ಟಿದ್ದಾರೆ.
ಇನ್ನು ದಾಳಿ ಮುಂದುವರೆಸಿದ ಪೊಲೀಸರು, ಮೂರೂರು ಗುಡ್ಡದ ಮೇಲೆ ಗಾಂಜಾ ಸೇವನೆ
ಮಾಡುತ್ತಿದ್ದ ವಿಶಾಲ್ ಭಂಡಾರಿ, ನವೀನ ಗೌಡ ಎಂಬುವರನ್ನು ಬಂಧಿಸಿದ ಪೊಲೀಸರು, ಇವರೀರ್ವರೂ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ವೈದ್ಯಕೀಯ ತಪಾಸಣೆಯಿಂದ ಖಚಿತ ಪಡಿಸಿಕೊಂಡು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್ಐ ನವೀನ್ ನಾಯ್ಕ, ಸಿಬ್ಬಂದಿಗಳಾದ ಗಣೇಶ ನಾಯ್ಕ, ಲೊಕೇಶ ಅರಶಿನಗುಪ್ಪಿ , ಗುರು ನಾಯಕ, ಪ್ರದೀಪ ನಾಯಕ, ಸುಬ್ರಮಣ್ಯ ಹೆಗಡೆ ಇವರುಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.