ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಮಾರ್ಚ್ 8 ರಿಂದ 12 ರವರೆಗೆ ಐದು ದಿನಗಳ ಕಾಲ ನಾಡು ನುಡಿಯ ಅಭಿಮಾನದ ನಾಡ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ಜಿಲ್ಲಾ ಸಹ ಕಾರ್ಯದರ್ಶಿ ಉದಯ ಭಟ್ ಕೂಜಳ್ಳಿ ಮಾಹಿತಿ ನೀಡಿದರು.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಹಾಗೂ ಎಚ್.ಎಲ್ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಾದ್ಯಕ್ಷ ಹಾಗೂ ನಿವೃತ್ತ ಯೋಧ ಸಿಂಹ ಶಿವು ಗೌಡ ಹಾಗೂ ವಿಶ್ರಾಂತ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅರಳಿ ನಾಗರಾಜ ಆಗಮಿಸಲಿದ್ದಾರೆ.
ಜಿಲ್ಲಾ ಹಾಗೂ ತಾಲೂಕಿನ ಶ್ರೇಷ್ಠ ಕಲಾವಿದರು ಹಾಗೂ ರಾಜ್ಯ ಹಾಗೂ ಹೊರರಾಜ್ಯದ ಸಿನಿಮಾ ಮತ್ತು ಧಾರಾವಾಹಿ ಕಲಾವಿದರು ಭಾಗಹಿಸಲಿದ್ದಾರೆ.ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ತಂಡ ಹಾಗೂ ಕಾಂತಾರಾ ತಂಡದಿಂದ ಕಾಮಿಡಿ,ಸರಿಗಮಪ,ಕನ್ನಡ ಕೋಗಿಲೆ ತಂಡದಿಂದ ಸಂಗೀತ ಹಾಗೂ ಡಾನ್ಸ್, ಜಾದೂ ಮಿಮಿಕ್ರಿ ಕಾರ್ಯಕ್ರಮಗಳು ಐದು ದಿನಗಳ ಕಾಲ ನಡೆಯಲಿದೆ.
ಮೊದಲನೇ ದಿನ ಸರಿಗಮ ಖ್ಯಾತಿಯ ಸುಹಾನ ಸೈಯದ್ ಮತ್ತು ಮೆಹಬೂಬ್ ತಂಡದಿಂದ ಸಂಗೀತ ಕಾರ್ಯಕ್ರಮ, ಎರಡನೇ ದಿನ ದಿವ್ಯಾ ರಾಮಚಂದ್ರ ಮತ್ತು ದಿಲ್ ಸೇ ದಿಲೀಪ ತಂಡದ ಆರ್ಕೆಸ್ಟ್ರಾ, ಮೂರನೇ ದಿನ ಕಾಂತಾರ ಸಿನಿಮಾ ಖ್ಯಾತಿಯ ತಂಡದಿಂದ ಹಾಸ್ಯ ನಾಟಕ, ನಾಲ್ಕನೇ ದಿನ ಮಜಭಾರತ ಖ್ಯಾತಿಯ ಕಾರ್ತಿಕ,ರಾಘವೇಂದ್ರ ಹಾಗೂ ತಂಡದಿಂದ ಹಾಸ್ಯ ಕಾರ್ಯಕ್ರಮ, ಐದನೇ ದಿನ ಕನ್ನಡ ಕೋಗಿಲೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಬಿಗ್ ಬಾಸ್ ಹಾಗೂ ಸಿನಿಮಾ ಸೆಲಬ್ರೆಟಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಮ್ಯುಸ್ಮೆಂಟ್ ಪಾರ್ಕ್, ಆಹಾರ ಮೇಳ,ಸ್ಟಾಲ್ ಗಳು ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ನಾಡ ವೈಭವವನ್ನು ಅದ್ದೂರಿಯಾಗಿ ನಡೆಸಲು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಿನಂತಿಸಿದರು.