ಕುಮಟಾ : ಶುಕ್ರವಾರ ಮಧ್ಯಾಹ್ನದಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಅವಾಂತರ ಸೃಷ್ಟಿಯಾಗಿದೆ, ಹೌದು ಮಳೆಯ ಪರಿಣಾಮವಾಗಿ, ಕುಮಟಾ ಶಿರಸಿ ರಸ್ತೆಗೆ ಹೊಂದಿಕೊಂಡಿರುವ ಬೆಣ್ಣೆಹೊಳೆ ಉಕ್ಕಿ ಹರಿದಿದ್ದು, ಸೇತುವೆ ನಿರ್ಮಾಣಕ್ಕೆಂದು ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಿದ್ದ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದ ಶಿರಸಿ-ಕುಮಟಾ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಶುಕ್ರವಾರ ಶಿರಸಿ ಭಾಗದ ಘಟ್ಟದ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಯಿಂದ ಒಮ್ಮೆಲೆ ಬೆಣ್ಣೆ ಹೊಳೆಗೆ ಹರಿದುಬಂದ ನೀರಿನ ರಭಸಕ್ಕೆ ಡೈವರ್ಸನ್ ರಸ್ತೆಗಳು ಹಾಗು ಪೈಪ್‌ಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಸಂಚಾರ ಪೂರ್ಣಪ್ರಮಾಣದಲ್ಲಿ ನಿಂತುಹೋಗಿದೆ. ಸಂಚಾರ ಸಂಪೂರ್ಣ ಸ್ಥಗಿತವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಗಜು ಪೈ ಮಾಹಿತಿ ನೀಡಿದ್ದಾರೆ.
ಕುಮಟಾ ಶಿರಸಿ ರಸ್ತೆ ಓಡಾಟ ಕಷ್ಟ ಎಂಬ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ವರದಿ ಪ್ರಸಾರವಾಗಿತ್ತು. ಇದೀಗ ಇಲ್ಲಿಯ ರಸ್ತೆಯೇ ಬಂದ್ ಆಗಿದೆ. ಕುಮಟಾ-ಶಿರಸಿ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಸೇತುವೆ ಕಾಮಗಾರಿಗಾಗಿ ಪೈಪ್ ಹಾಕಿ ಡೈವರ್ಸನ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಪೈಪ್‌ಗಳಲ್ಲಿ ನೀರು ತುಂಬಿಕೊಂಡು ಡೈವರ್ಸನ್ ರಸ್ತೆಗಳು ಕುಸಿಯುವ ಆತಂಕವಿತ್ತು. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುವ ಲಘು ವಾಹನಗಳು ಬಹಳ ಎಚ್ಚರಿಕೆಯಿಂದ ಸಂಚರಿಸುವಂತೆ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಅವರು ಕಳೆದ ಎರಡು ದಿನಗಳ ಹಿಂದೆ ಮನವಿ ಮಾಡಿದ್ದರು.