ಗೋಕರ್ಣ : ಇಲ್ಲಿಯ ಶ್ರೀ ಮಹಾಬಲೇಶ್ವರ ದೇವಾಲಯದ ಆನುವಂಶೀಯ ಉಪಾಧಿವಂತ ಮಂಡಲದ ಯುಗಾದಿಯಿಂದ - ಯುಗಾದಿಯವರೆಗಿನ ನೂತನ ವಿಶ್ವಾವಸು ಸಂವತ್ಸರದ ಅನಂತ ಶ್ರೀ ವಿಭೂಷಿತ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಶ್ರೀಪಾದಂಗಳವರು ವೈಶಾಖ ಮಾಸ ಕೃಷ್ಣ ಪಕ್ಷ ಮಂಗಳವಾರದಂದು ಶೃಂಗೇರಿಯ ಗುರು ನಿವಾಸದಲ್ಲಿ ಬಿಡುಗಡೆ ಗೊಳಿಸಿದರು.
ಈ ಕ್ಯಾಲೆಂಡರ್ ಪಂಚಾಂಗವು ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು ಪಂಚಾಂಗಗಳಾದ ದಿನ, ತಿಥಿ, ನಕ್ಷತ್ರ, ಯೋಗ, ಕರ್ಣ ಇವುಗಳನ್ನು ಆಂಗ್ಲ ದಿನಾಂಕದೊಂದಿಗೆ ಸಂಯೋಜಿಸಿ ಕ್ಯಾಲೆಂಡರ್ ರೂಪದಲ್ಲಿ ಪ್ರತಿಯೊಬ್ಬರಿಗೂ ಸರಳವಾಗಿ ಬಳಸುವಂತೆ ರಚಿಸಲಾಗಿದೇಯಲ್ಲದೆ ಈ ವರ್ಷ ವಿಶೇಷವಾಗಿ ಜಗದ್ಗುರು ಮಹಾಸನ್ನಿದಾನಂಗಳವರ ವಜ್ರೋತ್ಸವ ಅಂಗವಾಗಿ ಗೋಕರ್ಣದ ವಿವಿದೆಡೆಯಲ್ಲಿ ಆನುವಂಶೀಯ ಉಪಾಧಿವಂತ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾದ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮದ ಚಿತ್ರಪಟವನ್ನು ಒಳಗೊಂಡಿರುವುದು ಒಂದು ವಿಶೇಷವಾಗಿದ್ದು ಈ ಬಗ್ಗೆ ಶ್ರೀಗಳ ಗಮನಕ್ಕೆ ತರಲಾಗಿ ಸಂಘದ ಕಾರ್ಯ ವೈಕರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅನುಗ್ರಹಿಸಿ ಆಶೀರ್ವದಿಸಿದರು.
ಈ ಕ್ಯಾಲೆಂಡರ್ ವಿಶೇಷತೆ ಏನೆಂದರೆ ಗ್ರಹಣಗಳು ಹಾಗೂ ಎಲ್ಲ ವಿವಿಧ ಧಾರ್ಮಿಕ ಮಹತ್ವದ ದಿನಗಳು ಹೋಮ ಹವನಗಳಿಗೆ ಬೇಕಾಗುವ ಅಗ್ನಿಯನ್ನು ಆಯಾ ದಿನದೊಂದಿಗೆ ಸಂಯೋಜಿಸಲಾಗಿದೆ ಎಂದು ಗೋಕರ್ಣದ ಆನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷರು ಹಾಗೂ ಮಹಾಬಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕುಟುಂಬದ ವೇ.ರಾಜಗೋಪಾಲ ಅಡಿ ಶ್ರೀಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಂಡಲದ ಉಪಾಧ್ಯಕ್ಷರಾದ ವೇ. ಗುರುದತ್ತ ಹಿರೇ, ಮಂಡಲದ ಸಂಚಾಲಕರಾದ ಪ್ರಸನ್ನ ಜೊಗಭಟ್, ಮಂಡಲದ ಸಹ ಕಾರ್ಯದರ್ಶಿ ಹಾಗೂ ಗೋಪಿ ಮನೆತನದ ಶಂಕರ ಪಣಿ ಭಟ್ ಗೋಪಿ, ನಾಗೇಶ್ವರ ದೇವಾಲಯದ ಪ್ರಧಾನ ಅರ್ಚಕರು ಮತ್ತು ಮಂಡಲದ ಸದಸ್ಯರಾದ ರವಿ ಡಿ ಜೊಗಭಟ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಗುನಗ ಸಮಾಜದ ಯುವ ಘಟಕದ ಸಂಚಾಲಕರು ಮತ್ತು ಕುಮಟ ಬಾಡ ಹಿರೇ ಹೊಸಬ ದೇವಸ್ಥಾನದ ಪ್ರಧಾನ ಅರ್ಚಕರಾದ ಪವನ ಗುನಗ ಇನ್ನಿತರರು ಉಪಸ್ಥಿತರಿದ್ದರು.