ಕಾರವಾರ: ವಿಧಾನಸಭಾ ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರಂಟಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈಡೇರಿಸಿದೆ. 'ನುಡಿದಂತೆ ನಡೆದ ಕಾಂಗ್ರೆಸ್' ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೇ ಮತದಾರರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಗೆಲ್ಲಿಸಿಕೊಡಬೇಕಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಹೇಳಿದರು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಜನರ ಬದುಕಿನ ಚುನಾವಣೆ ಆಗಿತ್ತು. ಜನರು ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ಜಾರಿಗೆ ತರುವ ಆಶ್ವಾಸನೆ ನೀಡಿತ್ತು. ಅದಕ್ಕಾಗಿ ಜನತೆ 136 ಸ್ಥಾನದಲ್ಲಿ ಗೆಲ್ಲಿಸಿಕೊಟ್ಟಿದ್ದರು. ಕೊಟ್ಟ ಮಾತಿನಂತೆ ಎಲ್ಲಾ ಭರವಸೆ ಈಡೇರಿಸಿದ್ದೇವೆ ಎಂದರು.
ಒಂದು ಹಳ್ಳಿಯಲ್ಲಿ ನೂರು ಮನೆ ಇದ್ದರೆ ತೊಂಬತ್ತೆಂಟು ಮನೆಗಳಿಗೆ ಗ್ಯಾರಂಟಿ ಯೋಜನೆ ಲಾಭ ತಲುಪಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 3.09 ಲಕ್ಷ ಪಡಿತರ ಚೀಟಿ ಇದ್ದು, ಪ್ರತಿ ತಿಂಗಳು ಐದು ಕೆಜಿ ಅಕ್ಕಿಯ ಹಣ ಈವರೆಗೆ 129 ಕೋಟಿ ಸರ್ಕಾರ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 4.22 ಲಕ್ಣ ಸ್ಥಾವರಗಳು ನೋಂದಾವಣಿಯಾಗಿವೆ. ಈ ಪೈಕಿ 7708 ದೇವಸ್ಥಾನ, ಚರ್ಚ್, ಮಸೀದಿ, ಶೈಕ್ಷಣಿಕ ಸಂಸ್ಥೆಗಳಿವೆ. ಇದರಲ್ಲಿ ಒಟ್ಟು 3.78 ಲಕ್ಷ ಅರ್ಹ ಸ್ಥಾವರಗಳಿಗೆ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುತ್ತಿದೆ. 115.59 ಕೋಟಿ ಹಣವನ್ನು ಗೃಹಜ್ಯೋತಿ ಯೋಜನೆಯಡಿ ಸರ್ಕಾರ ಜನರ ಪರವಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ಅರ್ಹ 3.19 ಲಕ್ಷ ಮಹಿಳೆಯರಲ್ಲಿ 3.14 ಮಹಿಳೆಯರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಅವರಿಗೆ 389,43,30,000 ಕೋಟಿ ಹಣವನ್ನ ಈ ಯೋಜನೆಯಡಿ ಹಣ ಸಂದಾಯ ಮಾಡಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 4,76,09,054 ಮಹಿಳೆಯರು ಲಾಭವನ್ನ ಪಡೆದಿದ್ದು, ಒಟ್ಟು 135,26,48,671 ರೂಪಾಯಿ ಸಂದಾಯ ಮಾಡಿದೆ. 1,72,497 ಮಹಿಳೆಯರು ಪ್ರತಿ ದಿನ ಇದರ ಲಾಭ ಪಡೆಯುತ್ತಿದ್ದು, ಪ್ರತಿ ದಿನ 49,00,901 ಲಕ್ಷ ಹಣವನ್ನ ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಸಂದಾಯ ಮಾಡುತ್ತಿದೆ ಎಂದು ಹೇಳಿದರು.
ಯುವನಿಧಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 3611 ಅರ್ಜಿ ನೊಂದಾಯಿಸಲಾಗಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಜನರಿಗೆ ಗ್ಯಾರಂಟಿ ಯೋಜನೆಯನ್ನ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸರ್ಕಾರ ಈ ಸವಲತ್ತುಗಳನ್ನು ಫಲಾನುಭವಿಗಳಿಗೆ ಮುಟ್ಟಿಸಲು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ರಚನೆ ಮಾಡಿದೆ. ಯಾರಿಗೆ ಗ್ಯಾರಂಟಿ ಯೋಜನೆ ತಲುಪದೇ ಇದ್ದರೆ ಅದನ್ನ ತಲುಪಿಸುವ ಕೆಲಸವನ್ನ ಪ್ರಾಧಿಕಾರ ಮಾಡಲಿದೆ. ಯಾರಿಗೇ ಸಮಸ್ಯೆ ಇದ್ದರೂ ಪ್ರಾಧಿಕಾರದ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ.
ದೇವರಾಜ್ ಅರಸು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದರು. ಆಗ ಪ್ರತಿ ಮನೆಯವರೂ ಇದರ ಸದುಪಯೋಗ ಮಾಡಿಕೊಂಡಿದ್ದಾರೆ. ಅದರಂತೆ ಈಗ ಗ್ಯಾರಂಟಿ ಯೋಜನೆಯ ಲಾಭವನ್ನ ಸಹ ಪ್ರತಿ ಮನೆಯವರು ಪಡೆದಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದೆ. ಪ್ರತಿ ಮನೆಗೆ ವಿಶ್ವಾಸದಿಂದ ಹೋಗಿ ಮತ ಕೇಳುವ ಹಕ್ಕು ಪಕ್ಷ ತಂದು ಕೊಟ್ಟಿದ್ದು, ಈ ಬಾರಿಯೂ ಮತದಾರರು ಕಾಂಗ್ರೆಸ್ ಪಕ್ಷದ ಪರ ಮತಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ಹೊನ್ನಾವರದ ಅಣ್ಣಪ್ಪ ನಾಯ್ಕ, ಕಾಂಗ್ರೆಸ್ ಮುಖಂಡರಾದ ನಾಗರಾಜ ಮುರ್ಡೇಶ್ವರ, ರಾಜೇಂದ್ರ ರಾಣೆ, ಅಶೋಕ್ ಗೌಡ, ಪಾಂಡುರಂಗ ಗೌಡ, ಶಂಕರ್ ಅಳಿಗುಂಜಿ, ಎಂಪಿ ಗೌಡ, ಚಂದ್ರಕಾಂತ ಆಗೇರ, ರಾಜೇಶ ಚಂದ್ರಕಾಂತ ನಾಯ್ಕ, ಗಿರೀಶ್ ಪಟಗಾರ್, ಸ್ನೇಹ ಹಳದಂಕರ್, ಬಾಬು ಶೇಖ್, ನೂತನ್ ಜೈನ್, ರಮೇಶ ಮುದಗೇಕರ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿದ್ಯಾವಂತ ಅಭ್ಯರ್ಥಿ. ಓರ್ವ ವೈದ್ಯೆ ಈ ಬಾರಿ ಅಭ್ಯರ್ಥಿಯಾಗಿರುವುದರಿಂದ ಹಾಗೂ ಗ್ಯಾರಂಟಿ ಯೋಜನೆ ಸದುಪಯೋಗ ಪಡಿಸಿಕೊಂಡ ಜನರು ಕಾಂಗ್ರೆಸ್ ಪರ ಮತ ಚಲಾಯಿಸುವ ವಿಶ್ವಾಸವಿದೆ.
ಸತೀಶ್ ನಾಯ್ಕ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು