ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಭಟ್ಕಳದಿಂದ ಮುಂಡಗೋಡ, ಹಳಿಯಾಳ, ಜೊಯಿಡಾದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಕಿತ್ತೂರು- ಖಾನಾಪುರ ತಾಲೂಕಿನಿಂದಲೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದರು. ಕಾಂಗ್ರೆಸ್ ಪಕ್ಷದ ಶಾಲು, ಬಾವುಟ ಹಿಡಿದು ಕಾಂಗ್ರೆಸ್ ಪರ, ಡಾ.ಅಂಜಲಿ ಅವರ ಪರ ಘೋಷಣೆಗಳನ್ನು ಕೂಗಿದರು.
ಮೆರವಣಿಗೆಗೂ ಮುನ್ನ ಡಾ.ಅಂಜಲಿ ಹಾಗೂ ಪಕ್ಷದ ಮುಖಂಡರು ಇಲ್ಲಿನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಮೆರವಣೆಗೆಯು ಹೆಂಜಾ ನಾಯ್ಕ ವೃತ್ತ, ಸವಿತಾ ವೃತ್ತ, ಸುಭಾಷ ವೃತ್ತದ ಮೂಲಕ ಗ್ರೀನ್ ಸ್ಟ್ರೀಟ್ ರಸ್ತೆಯಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ ತಲುಪಿತು.
ಮೆರವಣಿಗೆಯ ವೇಳೆಯೇ ಮಾತನಾಡಿದ ಡಾ.ಅಂಜಲಿ ನಿಂಬಾಳ್ಕರ, ಕಿತ್ತೂರು- ಖಾನಾಪುರದ ಜನರು ಹಿಂದೆ ಇದ್ದ ಬಿಜೆಪಿ ಸಂಸದರ ಫೋಟೋ ಕೂಡ ನೋಡಿಲ್ಲ. ಐದು ವರ್ಷ ಶಾಸಕಿಯಾಗಿದ್ದ ನಾನು ಅವರಿಗಿಂತ ಹೆಚ್ಚಿನ ಕೆಲ ಮಾಡಿದ್ದೇನೆ. ಇದೀಗ ನಿಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಪಕ್ಷದ ಕಾರ್ಯರ್ತರು ಮನೆ ಮನೆಗಳಿಗೆ ತೆರಳಿ ಪಕ್ಷದ ಸಿದ್ಧಾಂತವನ್ನು ಹಾಗೂ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದು ಕರೆಕೊಟ್ಟರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ಮುಂದಿನ 25 ವರ್ಷವನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಹಾಗೆಯೇ ಅವರ ಪ್ರಣಾಳಿಕೆಯೂ ಇದೆ. ಆದರೆ ಅಲ್ಲಿವರೆಗೆ ಜನರು ಏನು ಮಾಡಬೇಕು? ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ 2047ರ ಭಾರತದ ಕನಸು ಕಾಣುವುದು ದಡ್ಡತನ ಎಂದರು.
ಕಾಂಗ್ರೆಸ್ ಪಕ್ಷವು ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ತಯಾರಿಸಿಲ್ಲ. ಜನರೊಂದಿಗೆ ಬೆರೆತು, ಅವರ ಕಷ್ಟಗಳನ್ನು ಅರಿತು, ಅವರ ಅಭಿವೃದ್ಧಿಗಾಗಿ ಪ್ರಣಾಳಿಕೆ ಯನ್ನು ತಯಾರಿಸಿದೆ. ಅದರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.
ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವು ಉದ್ಯೋಗದ ಜತೆಗೆ ಕಾರ್ಮಿಕರು, ಮಹಿಳೆಯರು ಹಾಗೂ ರೈತರಿಗೆ ಉಪಯೋಗವಾಗುವ ಗ್ಯಾರಂಟಿಗಳನ್ನು ನೀಡಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಿಂದ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದಾರೆ. ಧರ್ಮ, ಜಾತಿ ನಡುವೆ ದ್ವೇಷ ತಂದಿಟ್ಟು ಚುನಾವಣೆ ಮಾಡುತ್ತಿದ್ದಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸಹ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ಉರಿ ಬಿಸಿಲಲ್ಲಿ ಸಹ ಉತ್ಸಾಹ ಕಳೆದುಕೊಳ್ಳದೆ ಮೆರವಣಿಗೆಯಲ್ಲಿದ್ದರು. ಕಾರ್ಯಕರ್ತರು ಕೆಲವರು ಬಿಸಿಲ ಝಳಕ್ಕೆ ರಸ್ತೆ ಬದಿಯಲ್ಲಿದ್ದ ಮರಗಳ ನೆರಳಿನಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಶಾಸಕ ಬಾಬಾ ಸಾಹೇಬ ಪಾಟೀಲ, ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ, ಮೀನುಗಾರ ಮುಖಂಡ ರಾಜು ತಾಂಡೇಲ ಮುಂತಾದವರಿದ್ದರು.
***
ಬಾಕ್ಸ್...
ರ್ಯಾಲಿ ಕೇಸರಿಮಯ....
ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆ ತುಂಬೆಲ್ಲ ಕೇಸರಿ ಪತಾಕೆಗಳು ಗೋಚರಿಸಿ ರ್ಯಾಲಿ ಸಂಪೂರ್ಣ ಕೇಸರಿಮಯವಾಗಿತ್ತು.
ಅಭ್ಯರ್ಥಿ ಡಾ.ಅಂಜಲಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರುಗಳು, ಕಾರ್ಯಕರ್ತರು ಕೂಡ ಕೇಸರಿ ಪೇಟ ತೊಟ್ಟು, ಕೇಸರಿ ಶಾಲು ಧರಿಸಿ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.