ಯಲ್ಲಾಪುರ- ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದಲ್ಲಿ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕೊನೆಗೌಡರಿಗೆ ಜೀವ ವಿಮೆ ಯೋಜನೆಗೆ ಯಲ್ಲಾಪುರ ತಾಲೂಕಾ ಮಟ್ಟದಲ್ಲಿ ಚಾಲನೆ ನೀಡಲಾಯಿತು.
ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾದ ಟಿ.ವಿ. ಹೆಗಡೆ ಮಾತನಾಡಿ, ಇದೊಂದು ಮಹತ್ವದ ಅತೀ ಅವಶ್ಯ ಕಾರ್ಯಕ್ರಮ, ಯಾರೂ ಕೂಡ ಬೇಕಂತೆ ಮರದಿಂದ ಬೀಳುವುದಿಲ್ಲ, ಅಥವಾ ಬೀಳಲಿ ಅಂತ ತೋಟದ ಮಾಲೀಕರು ಮರ ಹತ್ತಿಸುವುದಿಲ್ಲ, ಅಪಾಯ ಆದಾಗ ರಕ್ಷಣೆ ಅತ್ಯವಶ್ಯ, ಅನಂತ ಮೂರ್ತಿ ಹೆಗಡೆಯವರಿಗೆ ಅಭಿನಂದನೆ, ಮುಂದಿನ ವರ್ಷ ವಿಮೆ ಕಂತನ್ನು ನಾವೇ ತುಂಬಲು ಪ್ರಯತ್ನ ಮಾಡೋಣ ಎಂದರು.
ನಂತರ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ ಎಲ್ಲರೂ ಸುಖವಾಗಿರಲಿ ಎಂದು ನಾವೇ ಕಂತನ್ನು ಪಾವತಿಸಿ, ಪಾಲಿಸಿ ಪ್ರಾರಂಭ ಮಾಡಿದ್ದೇವೆ, ನನ್ನ ಆದಾಯದ ಒಂದು ಭಾಗ ಹಣವನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇನೆ. ಸಮಾಜದಲ್ಲಿ ಎಲ್ಲರೂ ಪ್ರೀತಿಯಿಂದ ಅನ್ಯೋನ್ಯವಾಗಿ ಸಹೋದರರಂತೆ ಬದುಕಬೇಕು. ಅನಾಹುತವಾದರೆ ಯಾವುದೇ ಕಾರಣಕ್ಕೂ ಕೊನೆ ಗೌಡರ ಕುಟುಂಬ ಬೀದಿಗೆ ಬರಬಾರದು, ಅವರಿಗೆ ಸಮಸ್ಯೆ ಆಗಬಾರದು. ಅವಘಡ ಆದಾಗ ಅಡಿಕೆ ತೋಟದ ಮಾಲೀಕರಿಗೂ ಕೂಡ ಕೊನೆ ಗೌಡರ ಜೀವನಾಂಶ ಕೊಡುವುದು ಕಷ್ಟವಾಗುತ್ತದೆ, ಅದಕ್ಕೆ ಯಾರಿಗೂ ಸಮಸ್ಯೆ ಬೇಡ ಅಂತ ಪೋಸ್ಟ್ ಆಫೀಸ್ ಮುಖಾಂತರ ಜೀವವಿಮೆ ಪ್ರಾರಂಭ ಮಾಡಿದ್ದೇನೆ. ಇದಕ್ಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಪ್ರೇರಣೆ ಎಂದರು. ಮುಂದಿನ ದಿನದಲ್ಲಿ ಯಲ್ಲಾಪುರ ತಾಲೂಕು ಕೊನೆಗೌಡರ ಸಮ್ಮೇಳನ ನಡೆಸಿ ಹಿರಿಯ ಕೊನೆ ಗೌಡರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಗಣಪತಿ ಭಟ್ ನಿರೂಪಿಸಿದರು. ಈ ಸಂಧರ್ಭದಲ್ಲಿ ಇಲ್ಲಿನ 50 ಕ್ಕೂ ಹೆಚ್ಚು ಕೊನೆಗೌಡರಿಗೆ ಜೀವವಿಮೆ ಮಾಡಿಸಲಾಯಿತು.
ಬಾಕ್ಸ್:
*ಕೊನೆಗೌಡರ ಉಚಿತ ವಿಮೆಯಲ್ಲಿ ಏನಿದೆ:*
ಅನಂತಮೂರ್ತಿ ಹೆಗಡೆ ಟ್ರಸ್ಟ್ ನವರು ಪಾಲಿಸಿ ಪ್ರೀಮಿಯಂ ಕಂತನ್ನು ಅವರೇ ಪಾವತಿಸಿ, ಇಂಡಿಯನ್ ಪೋಸ್ಟ್ ನ ಯೋಜನೆಯಾದ ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ , ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ /ಶಾಶ್ವತ ಅಂಗವೈಕಲ್ಯ /ಭಾಗಶಃ ಅಂಗವೈಕಲ್ಯಕ್ಕೆ 10,00,000 ರೂಪಾಯಿಗಳ ಕವರೇಜ್ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ ರೂ 60,000 ವರೆಗೆ ಒಳರೋಗಿ ವೆಚ್ಚ, ರೂ 30,000 ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ ರೂ 1,000 ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, ರೂ 25,000 ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು ರೂ 5000 ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪವನ್ನು ಅನಂತಮೂರ್ತಿ ಮಾಡಿದ್ದಾರೆ. ಇದರ ಸದುಪಯೋಗ ಎಲ್ಲರೂ ಜಿಲ್ಲೆಯ ಎಲ್ಲರೂ ಬಳಸಿಕೊಳ್ಳಬೇಕು.