ಕುಮಟಾ:ಸಮಾಜದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಆರ್.ಎಸ್ ಭಾಗವತರು ನನ್ನನ್ನು ಮಗಳ ಹಾಗೆ ನೋಡಿಕೊಂಡಿದ್ದರು ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಕುಮಟಾ (ಪಿ.ಎಲ್.ಡಿ ಬ್ಯಾಂಕ್) ಇದರ ಆವಾರದಲ್ಲಿ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ದಿ. ರಾಮಚಂದ್ರ ಸೀತಾರಾಮ ಭಾಗ್ವತ್ (ಆರ್.ಎಸ್ ಭಾಗ್ವತ್) ರವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಕುಮಟಾದಲ್ಲಿ ಇನ್ನೂ ಎಷ್ಟೋ ಕೆಲಸ ಮಾಡುವುದಿದೆ. ಮಾಡಬಹುದಾಗಿದೆ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ನಮ್ಮ ಕಾಲ ಮುಗೀತಿದೆ ಆದರೆ ಯುವಕರು ಜನ ಸೇವೆಗೆ ಮುಂದಾಗಬೇಕು ಎನ್ನುತ್ತಾ, ಭಾಗ್ವತ ಅವರ ಕುಟುಂಬವೆ ಒಂದು ಸಹಕಾರಿ ಕುಟುಂಬ. ಈಗ ಅವರ ಮಕ್ಕಳು ಭಾಗ್ವತ ಆವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆರ್.ಎಸ್.ಭಾಗ್ವತರ ಮೊಮ್ಮಗ ಈ ಬ್ಯಾಂಕಿನ ಅಧ್ಯಕ್ಷ ಭುವನ್ ಭಾಗ್ವತ ನನ್ನ ಎರಡನೆ ಮಗ ಇದ್ದಂತೆ. ಆತನ ಕಾರ್ಯಶೈಲಿಯನ್ನ ನಾನು ಮೆಚ್ಚಿದ್ದೇನೆ. ಭುವನ್ ಭಾಗ್ವತ ಅಂತಹ ಕ್ರಿಯಾಶೀಲ ಯುವಕರು ನಮಗೆ ಬೇಕು ಎಂದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟನಾ ನುಡಿಗಳನ್ನಾಡುತ್ತಾ, ಆರ್.ಎಸ್ ಭಾಗ್ವತ್ ಅವರು ೬೦ ವರ್ಷಗಳ ಕಾಲ ಜಿಲ್ಲೆಯ ಹಾಗೂ ರಾಜ್ಯಮಟ್ಟದಲ್ಲಿ ಸಹಕಾರ ಕಾರ್ಯದಲ್ಲಿ ಸೇವೆ ಮಾಡಿದಂತವರು ಎನ್ನುತ್ತಾ, ಜಿಲ್ಲೆಯ ಅಭಿವೃದ್ಧಿ ಈವರೆಗೆ ಆಗಿದೆ ಎಂದರೆ ಇಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆ ಕಾರಣ ಎಂದು ಭಾಗ್ವತರು ಹೇಳಿದ ಮಾತುಗಳನ್ನು ಅವರು ಸ್ಮರಿಸಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮ ಸರ್ವ ಧರ್ಮ ಸಮ್ಮೇಳನದಂತೆ ಕಾಣುತ್ತಿದೆ. ಎಲ್ಲಾ ಜಾತಿ, ಜನಾಂಗದ ಜನ ಆರ್.ಎಸ್ ಭಾಗ್ವತರ ಅಭಿಮಾನದಿಂದ ಇಲ್ಲಿ ಬಂದಿದ್ದಾರೆ ಎನ್ನುತ್ತಾ ಭಾಗ್ವತರ ಒಡನಾಟ ಸ್ಮರಿಸಿಕೊಂಡರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್ ಮಾತನಾಡಿ ಆರ್.ಎಸ್ ಭಾಗ್ವತರ ಕುಟುಂಬದ ಸದಸ್ಯ ಎಂದುಕೊಳ್ಳಲು ಹೆಮ್ಮೆ ಎನಿಸುತ್ತದೆ. 1966ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ ಕೃಷಿಕರಿಗೆ ಮೊದಲ ಬಾರಿಗೆ ಸಾಲ ಸೌಲಭ್ಯ ಕಲ್ಪಿಸಿ ಮೊದಲ ಬ್ಯಾಂಕ್ ಆಗಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ ಆಳ್ವಾ,ಶ್ರೀಧರ ಭಾಗ್ವತ,ಬ್ಯಾಂಕ್ ಉಪಾಧ್ಯಕ್ಷ ಜಿ.ಐ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ, ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಕೆಡಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ಪುತ್ರ ಸೀತಾರಾಮ ಭಾಗ್ವತ್ ಇತರರು ಉಪಸ್ಥಿತಿತರಿದ್ದರು. ಗಣೇಶ ಜೋಶಿ ನಿರೂಪಿಸಿದರು.