ಕುಮಟಾ: ಪುರಸಭೆಯ ಅಧ್ಯಕ್ಷರಾಗಿದ್ದ ಮೋಹಿನಿ ಗೌಡ ಹಾಗೂ ಉಪಾಧ್ಯಕ್ಷರಾಗಿದ್ದ ರಾಜೇಶ ಪೈ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಪುರಸಭಾ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ನೂತನ ಅಧ್ಯಕ್ಷರಾಗಿ ಅನುರಾಧ ಬಾಳೇರಿ ಮತ್ತು ಉಪಾಧ್ಯಕ್ಷರಾಗಿ ಸುಮತಿ ಭಟ್ ಅವಿರೋಧವಾಗಿ ಆಯ್ಕೆಯಾದರು.
ಮುಂದಿನ 15 ತಿಂಗಳ ಅವಧಿಗೆ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪುರಸಭಾ ಸದಸ್ಯರಾದ ಅನುರಾಧ ಬಾಳೇರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವಿವೇಕ ಶೇಣ್ವಿ ಅವರು ಕಾರ್ಯನಿರ್ವಹಿಸಿದರು.
ನನ್ನ ಮೇಲೆ ವಿಶ್ವಾಸ ಇಟ್ಟು ನಮ್ಮ ಪಕ್ಷದವರು ನೀಡಿದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪಟ್ಟಣದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅನುರಾಧ ಬಾಳೇರಿ ಹೇಳಿದರು.
ಈ ಸಂಧರ್ಭಧಲ್ಲಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರಾದ ಸುಮತಿ ಭಟ್, ಸದಸ್ಯರಾದ ತುಳಸು ಗೌಡ, ಮೋಹಿನಿ ಗೌಡ, ಬಿಜೆಪಿಯ ತಾಲೂಕಾಧ್ಯಕ್ಷರಾದ ಹೇಮಂತಕುಮಾರ ಗಾಂವ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಸೇರಿದಂತೆ ಇತರಿದ್ದರು.
