ಯಲ್ಲಾಪುರ: ಮಹಾರಾಷ್ಟ್ರ ದಿಂದ ಕಿತ್ತಳೆ ಹಣ್ಣು ತುಂಬಿಕೊಂಡು ಕೇರಳದ ಕ್ಯಾಲಿಕೆಟ್‌ಗೆ ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಬಿಸಗೋಡು ಕ್ರಾಸ್ ಬಳಿ ಹೆದ್ದಾರಿ ಬಿಟ್ಟು ಪಕ್ಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ.ಲಾರಿಯಲಿದ್ದ ಚಾಲಕ ಮತ್ತು ಸಹಾಯಕ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಹಣ್ಣು ತುಂಬಿದ ಲಾರಿಯು ಹೆದ್ದಾರಿ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಕ್ಕೆ ತಾಗಿದ ಸ್ಥಿತಿಯಲ್ಲಿ ಬಂದು ಬಿದ್ದಿದೆ. ಒಂದು ವೇಳೆ ಕಂಬಕ್ಕೆ ಜೋರಾಗಿ ಗುದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು. ಆದರೆ ಅದೃಷ್ಟವಶಾತ್ ಹಾಗೇನು ಆಗದೆ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.