Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಉತ್ತರ ಕನ್ನಡ ಜಿಲ್ಲೆಗೆ ತೀವ್ರ ಅನ್ಯಾಯ – ಮೀನುಗಾರ ಸಮುದಾಯದ ನಾಯಕ ಮಂಕಾಳ ವೈದ್ಯರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದು ಖಂಡನೀಯ : ನಾಗೇಶ್ ಎಸ್



ಹೊನ್ನಾವರ: ಭಟ್ಕಳ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡದೇ ಕೈಬಿಟ್ಟಿರುವುದು ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಹಾಗೂ ಬೇಸರ ಮೂಡಿಸಿದೆ. ಮೊದಲ ಪಟ್ಟಿಯಲ್ಲಿ ಅವರ ಹೆಸರು ಇದ್ದು, ಕೊನೆಯ ಕ್ಷಣದಲ್ಲಿ ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂಬ ವರದಿಗಳು ಭಟ್ಕಳ–ಹೊನ್ನಾವರ ಕ್ಷೇತ್ರದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ವಿಶ್ವಾಸಕ್ಕೆ ಧಕ್ಕೆಯುಂಟುಮಾಡಿವೆ
ಮಂಕಾಳ ವೈದ್ಯರ ಅಭಿಮಾನಿಯಾದ  ನಾಗೇಶ್ ಎಸ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಣ್ಣ ಮೀನುಗಾರ ಸಮುದಾಯದಿಂದ ಹಂತ ಹಂತವಾಗಿ ಬೆಳೆದು, "ಜನಸೇವೆಯೇ ಜನಾರ್ಧನ ಸೇವೆ" ಎಂಬ ಧ್ಯೇಯದೊಂದಿಗೆ ಜನಪರ ಸೇವೆಯಲ್ಲಿ ತೊಡಗಿಕೊಂಡಿರುವ ಜನನಾಯಕನಿಗೆ ಸಚಿವ ಸ್ಥಾನ ನಿರಾಕರಿಸಿರುವುದು ಕೇವಲ ಒಬ್ಬ ವ್ಯಕ್ತಿಗೆ ಆಗಿರುವ ಅನ್ಯಾಯವಲ್ಲ; ಇದು ಕರಾವಳಿ ಭಾಗದ ಜನರ ಆಶೋತ್ತರಗಳಿಗೆ ಉಂಟಾದ ಹಿನ್ನಡೆಯಾಗಿದೆ ಎಂಬುದು ನಮ್ಮ ಅಭಿಪ್ರಾಯ. ಈ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಅಸಮಾಧಾನ ವ್ಯಕ್ತವಾಗುತ್ತಿರುವುದು ಗಮನಾರ್ಹ.

ಶ್ರೀ ಮಂಕಾಳ ವೈದ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿ, ರಾಜ್ಯದ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ, ಬಂದರುಗಳ ಅಭಿವೃದ್ಧಿಗೆ ಹಾಗೂ ಅನೇಕ ಜನಪರ ಯೋಜನೆಗಳ ಅನುಷ್ಠಾನಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅಂತಹ ಅನುಭವಿ ಹಾಗೂ ಜನಪರ ನಾಯಕನನ್ನು ಸಚಿವ ಸಂಪುಟದಿಂದ ಹೊರಗಿಡುವ ನಿರ್ಧಾರವನ್ನು ಮರುಪರಿಶೀಲಿಸಬೇಕು.


ರಾಜ್ಯ ಸರ್ಕಾರ ಹಾಗೂ ಪಕ್ಷದ ವರಿಷ್ಠರು ಉತ್ತರ ಕನ್ನಡ ಜಿಲ್ಲೆಯ ಜನರ ಭಾವನೆಗಳಿಗೆ ಗೌರವ ನೀಡಿ, ಶ್ರೀ ಮಂಕಾಳ ವೈದ್ಯ ಅವರಿಗೆ ರಾಜ್ಯ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ನಾವು ಆಗ್ರಹಿಸುತ್ತೇವೆ.

ಉತ್ತರ ಕನ್ನಡ ಜಿಲ್ಲೆಯ ಜನರು ನ್ಯಾಯಯುತ ಪ್ರತಿನಿಧಿತ್ವವನ್ನು ನಿರೀಕ್ಷಿಸುತ್ತಿದ್ದಾರೆ. ಜಿಲ್ಲೆಯ ಜನರ ಧ್ವನಿಗೆ ಗೌರವ ನೀಡಿ, ಶ್ರೀ ಮಂಕಾಳ ವೈದ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ಜಿಲ್ಲೆಯ ಜನರ ಒಕ್ಕೊರಲಿನ ಆಗ್ರಹವಾಗಿದೆ ಎಂದು ಮಂಕಾಳ ವೈದ್ಯರ ಅಭಿಮಾನಿಯಾದ  ನಾಗೇಶ್ ಎಸ್   ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.